ADVERTISEMENT

ಭಾಲ್ಕಿ: ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:34 IST
Last Updated 5 ಫೆಬ್ರುವರಿ 2026, 4:34 IST
ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಗೆ ಬಸ್ ಡಿಪೋ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಭೇಟಿ ನೀಡಿ ಗಾಯಳು ಚಾಲಕ ಚಂದ್ರಶೇಖರ ಸ್ವಾಮಿ ಆರೋಗ್ಯ ವಿಚಾರಿಸಿದರು
ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಗೆ ಬಸ್ ಡಿಪೋ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಭೇಟಿ ನೀಡಿ ಗಾಯಳು ಚಾಲಕ ಚಂದ್ರಶೇಖರ ಸ್ವಾಮಿ ಆರೋಗ್ಯ ವಿಚಾರಿಸಿದರು   

ಭಾಲ್ಕಿ: ತಾಲ್ಲೂಕಿನ ಬೀರಿ(ಕೆ) ಮಾರ್ಗದ ರಸ್ತೆಯಲ್ಲಿ ಬುಧವಾರ ಏಳು ಜನರು ಸೇರಿ ಭಾಲ್ಕಿ ಬಸ್ ಘಟಕಕ್ಕೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಡೆದು ಚಾಲಕ ಮತ್ತು ನಿರ್ವಾಹಕರನ್ನು ಥಳಿಸಿದ ಘಟನೆ ನಡೆದಿದೆ.

ಸೋನಾಳ ಗ್ರಾಮದ ನಿವಾಸಿ ಚಾಲಕ ಚಂದ್ರಶೇಖರ ಬಸಯ್ಯ ಸ್ವಾಮಿ ಮತ್ತು ದಾಡಗಿ ಗ್ರಾಮದ ನಿವಾಸಿ ನಿರ್ವಾಹಕ ಲಿಂಗರಾಜ ಸಿದ್ರಾಮಪ್ಪ ಅವರ ಮೇಲೆ ಬೀರಿ (ಕೆ) ನಿವಾಸಿ ವಿಶಾಲ ಸಂಜೀವಕುಮಾರ ಚವ್ಹಾಣ ಸೇರಿ ನಾಲ್ಕೈದು ಯುವಕರು ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಚಾಲಕ ಚಂದ್ರಶೇಖರ ಬಸಯ್ಯ ಸ್ವಾಮಿ ಅವರಿಗೆ ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ನಿರ್ವಾಹಕ ಲಿಂಗರಾಜ ಸಿದ್ರಾಮಪ್ಪ ನೀಡಿರುವ ದೂರಿನ ಮೇರೆಗೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಘಟನೆಯ ವಿವರ:

ಬಾಳೂರು-ಚಂದಾಪೂರ-ಬೀದರ್ ಮಾರ್ಗಕ್ಕೆ ಸಂಚರಿಸುವ ಬಸ್ ಭಾಲ್ಕಿ ನಿಲ್ದಾಣದಿಂದ ಬುಧವಾರ ಬೆಳಿಗ್ಗೆ 8.30ಕ್ಕೆ ಹೊರಟು 9ಗಂಟೆ ಸುಮಾರಿಗೆ ಬೀರಿ (ಕೆ) ಗ್ರಾಮ ತಲುಪಿದೆ. ಅಲ್ಲಿಂದ ಹೊರಡುವ ಮಾರ್ಗ ಮಧ್ಯೆ ಹಿಂಬದಿಯಿಂದ ಸ್ಕೂಟಿ ಮೇಲೆ ಬಂದ ವಿಶಾಲ ಎಂಬಾತ ಬಸ್‍ ಅಡ್ಡಗಟ್ಟಿ ಮುಂದೆ ಬರಲು ಬಸ್ ಬದಿ ದಾರಿ ನೀಡಲಿಲ್ಲ ಎಂದು ಆರೋಪಿಸಿ ಏಕಾಏಕಿ ಚಾಲಕ ಚಂದ್ರಶೇಖರ ಅವರ ಶರ್ಟ್ ಹಿಡಿದು ಎಳೆದಾಡಿ ಭುಜ, ಎದೆಯ ಮೇಲೆ ಮುಷ್ಟಿ ಕೈಯಿಂದ ಹೊಡೆದಿದ್ದಾನೆ. ವಿಶಾಲನ ಜತೆ ಗುರುತಿಸಿಕೊಂಡ ನಾಲ್ಕೈದು ಯುವಕರು ಬಸ್‌ನಿಂದ ಚಾಲಕ ಚಂದ್ರಶೇಖರ, ನಿರ್ವಾಹಕ ಲಿಂಗರಾಜ ಅವರನ್ನು ಹೊರತಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಡಿಪೋ ವ್ಯವಸ್ಥಾಪಕ ಭೇಟಿ:

ಘಟನೆಯ ವಿಷಯ ತಿಳಿದ ಬಸ್ ಘಟಕದ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಗಾಯಳುಗಳಾದ ಚಾಲಕ ಚಂದ್ರಶೇಖರ ಮತ್ತು ನಿರ್ವಾಹಕ ಲಿಂಗರಾಜ ಅವರ ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ತೀವ್ರ ಗಾಯಗೊಂಡಿದ್ದ ಚಾಲಕ ಚಂದ್ರಶೇಖರನ್ನು ಬ್ರೀಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.