ADVERTISEMENT

ಬೀದರ್‌: ಬ್ರಿಮ್ಸ್‌ನಲ್ಲಿ ಅಧ್ಯಯನಕ್ಕೆ ಮೃತದೇಹ ಕೊರತೆ

ಹತ್ತು ಎಂಬಿಬಿಎಸ್‌ ವಿದ್ಯಾರ್ಥಿಗಳ ಅಧ್ಯಯನಕ್ಕಿರಬೇಕು ಒಂದು ಮೃತದೇಹ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಜನವರಿ 2025, 4:49 IST
Last Updated 26 ಜನವರಿ 2025, 4:49 IST
2024ರ ನವೆಂಬರ್‌ 26ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ.ರಾಮಣ್ಣನವರ ಚಾರಿಟಬಲ್‌ ಟ್ರಸ್ಟ್‌ನಿಂದ ಬ್ರಿಮ್ಸ್‌ಗೆ ಎರಡು ಮೃತದೇಹಗಳನ್ನು ನೀಡಲಾಗಿತ್ತು
2024ರ ನವೆಂಬರ್‌ 26ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ.ರಾಮಣ್ಣನವರ ಚಾರಿಟಬಲ್‌ ಟ್ರಸ್ಟ್‌ನಿಂದ ಬ್ರಿಮ್ಸ್‌ಗೆ ಎರಡು ಮೃತದೇಹಗಳನ್ನು ನೀಡಲಾಗಿತ್ತು    

ಬೀದರ್‌: ನಗರದ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್‌) ಎಂಬಿಬಿಎಸ್‌ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೃತದೇಹಗಳು ಅಧ್ಯಯನಕ್ಕಿಲ್ಲ.

ಭಾರತೀಯ ವೈದ್ಯಕೀಯ ಮಂಡಳಿಯ (ಐಎಂಸಿ) ನಿಯಮದ ಪ್ರಕಾರ, 10 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆಗೆ ಕನಿಷ್ಠ ಒಂದು ಮೃತದೇಹ ಇರಬೇಕು. ಆದರೆ, ಬ್ರಿಮ್ಸ್‌ನಲ್ಲಿ ಸಾಕಷ್ಟು ಕೊರತೆ ಇದೆ.

ಬ್ರಿಮ್ಸ್‌ನಲ್ಲಿ ಪ್ರತಿ ವರ್ಷ 150 ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಪ್ರವೇಶ ಪಡೆದುಕೊಳ್ಳುತ್ತಾರೆ. ಕನಿಷ್ಠ 15 ಮೃತದೇಹಗಳು ಅಧ್ಯಯನಕ್ಕಾಗಿ ಇರಬೇಕು. ಆದರೆ, ಸದ್ಯ ಆರು ಮೃತದೇಹಗಳಷ್ಟೇ ಇವೆ. ಇದರಿಂದ ಆಳ ಅಧ್ಯಯನ, ಸಂಶೋಧನೆಗೆ ತೊಡಕಾಗುತ್ತಿದೆ ಎಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ.

ADVERTISEMENT

‘ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದು. ಮನುಷ್ಯನ ದೇಹದ ಪ್ರತಿಯೊಂದು ಅಂಗದ ಬಗ್ಗೆ ವಿವರಿಸಿ, ಜ್ಞಾನ ನೀಡಲಾಗುತ್ತದೆ. ದೇಹಗಳಿಗೆ ಕೊರತೆ ಉಂಟಾದರೆ ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಉಂಟಾಗುತ್ತದೆ. ಸ್ವಲ್ಪ ಶ್ರಮ ವಹಿಸಿದರೆ ಮೃತದೇಹಗಳಿಗೆ ವ್ಯವಸ್ಥೆ ಮಾಡಿಕೊಳ್ಳಬಹುದು’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

2024ರ ನವೆಂಬರ್‌ 26ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ.ರಾಮಣ್ಣನವರ ಚಾರಿಟಬಲ್‌ ಟ್ರಸ್ಟ್‌ನಿಂದ ಬ್ರಿಮ್ಸ್‌ಗೆ ಎರಡು ಮೃತದೇಹಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗಿತ್ತು. ಇದಕ್ಕೂ ಹಿಂದಿನ ವರ್ಷ, ಅಂದರೆ 2023ರಲ್ಲಿ ಇದೇ ಟ್ರಸ್ಟ್‌ ಎರಡು ಮೃತದೇಹಗಳನ್ನು ಬ್ರಿಮ್ಸ್‌ಗೆ ನೀಡಿತ್ತು. ಬ್ರಿಮ್ಸ್‌ನಲ್ಲಿ ಈಗಿರುವ ಒಟ್ಟು ಆರು ಮೃತದೇಹಗಳಲ್ಲಿ ನಾಲ್ಕು ರಾಮಣ್ಣನವರ ಚಾರಿಟಬಲ್‌ ಟ್ರಸ್ಟ್ ನೀಡಿರುವಂಥದ್ದು. ಮಿಕ್ಕುಳಿದ ಎರಡು ದೇಹಗಳಿಗೆ ಬ್ರಿಮ್ಸ್‌ ವ್ಯವಸ್ಥೆ ಮಾಡಿಕೊಂಡಿದೆ.

ಬ್ರಿಮ್ಸ್‌

ಕೊರತೆಗೇನು ಕಾರಣ?

‘ಬ್ರಿಮ್ಸ್‌ ಒಂದೇ ಅಲ್ಲ ದೇಶದಲ್ಲಿರುವ ಒಟ್ಟು ಮೆಡಿಕಲ್‌ ಕಾಲೇಜುಗಳ ಪೈಕಿ ಶೇ 15ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ತಕ್ಕಂತೆ ಮೃತದೇಹಗಳಿವೆ. ಉಳಿದ ಶೇ 85ರಷ್ಟು ಕಾಲೇಜುಗಳಲ್ಲಿ ಮೃತದೇಹಗಳಿಗೆ ಕೊರತೆ ಇದೆ’ ಎಂದು ಬ್ರಿಮ್ಸ್‌ ಅಂಗರಚನಾಶಾಸ್ತ್ರ (ಅನಾಟಮಿ) ವಿಭಾಗದ ಮುಖ್ಯಸ್ಥ ಡಾ.ಸಂದೀಪ್‌ ದೇಶಮುಖ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದೇಹದಾನಕ್ಕೆ ಸದ್ಯ ಬ್ರಿಮ್ಸ್‌ನಲ್ಲಿ 300ಕ್ಕೂ ಹೆಚ್ಚು ಜನ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಈ ಶರೀರಗಳೆಲ್ಲ ಸಿಗಲು ಕನಿಷ್ಠ 15ರಿಂದ 20 ವರ್ಷಗಳು ಬೇಕಾಗುತ್ತದೆ. ಸದ್ಯಕ್ಕೆ ಇದರಿಂದ ಯಾವುದೇ ಪರಿಹಾರ ಇಲ್ಲ. ಕೆಲವು ಸಮುದಾಯದವರು ದೇಹ ಕೊಡುವುದಿಲ್ಲ. ಇದು ಸಮಾಜಕ್ಕೆ ಅಂಟಿರುವ ಶಾಪ. ದೇಹದಾನದ ಮಹತ್ವದ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.