ADVERTISEMENT

ಕಮಲನಗರ: ಸೌಲಭ್ಯ ಕಾಣದ ವಸತಿ ನಿಲಯ

ಶೆಡ್‌ನಡಿ ವಿದ್ಯಾರ್ಥಿಗಳ ಜೀವನ; ಥಂಡಿ ಚಳಿಯಲ್ಲಿ ತಣ್ಣೀರ ಸ್ನಾನ

ಮನೋಜ ಕುಮಾರ್ ಗುದ್ದಿ
Published 2 ಜನವರಿ 2022, 5:21 IST
Last Updated 2 ಜನವರಿ 2022, 5:21 IST
ಕಮಲನಗರ ತಾಲ್ಲೂಕಿನ ಹೊಳಸಮುದ್ರ ವಸತಿ ನಿಲಯದ ಶೌಚಾಲಯ
ಕಮಲನಗರ ತಾಲ್ಲೂಕಿನ ಹೊಳಸಮುದ್ರ ವಸತಿ ನಿಲಯದ ಶೌಚಾಲಯ   

ಕಮಲನಗರ: ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಬಾಡಿಗೆ ಕಟ್ಟಡದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಮೂಲಸೌಲಭ್ಯಗಳ ಕೊರತೆ ಇದ್ದು, ಅವ್ಯವಸ್ಥೆಗಳ ತಾಣವಾಗಿದೆ.

ವಸತಿ ನಿಲಯದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ನಿಲಯಕ್ಕೆ ಔರಾದ್, ಹುಮನಾಬಾದ್, ಬಸವಕಲ್ಯಾಣ, ಬೀದರ್, ಭಾಲ್ಕಿ, ಕಮಲನಗರ ಸೇರಿದಂತೆ ಸುತ್ತಲ್ಲಿನ ವಿವಿಧ ಗ್ರಾಮಗಳ ಮಕ್ಕಳು ದಾಖಲಾಗಿದ್ದಾರೆ.

ನಿಲಯದಲ್ಲಿ ಮೂಲಸೌಲಭ್ಯಗಳ ಕೊರತೆಯು ಹಲವು ದಿನಗಳಿಂದ ಕಾಡುತ್ತಿದೆ. ಕುಡಿಯುವ ನೀರು, ಶೌಚಾಲಯ ಸಮಸ್ಯೆ, ಗ್ರಂಥಾಲಯ, ಕೋಣೆಗಳ ಅಭಾವ, ಓದುವ ಕೊಠಡಿಯಲ್ಲಿ ವಿದ್ಯುತ್ ಕೊರತೆಯಂತಹ ಸಮಸ್ಯೆಗಳ ಸುಳಿಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇರುವುದರಿಂದ ಸೂಕ್ತ ಭದ್ರತೆಯೂ ಇಲ್ಲ.

ADVERTISEMENT

ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿತ್ಯ ಬಯಲು ಬಹಿರ್ದೆಸೆಗೆ ತೆರಳುತ್ತಾರೆ. ಸ್ನಾನ ಮಾಡಲು ತಣ್ಣೀರಿದ್ದು, ಸರತಿ ಸಾಲಿನಲ್ಲಿ ನಿಲ್ಲಬೇಕು. ಚಳಿಗಾಲದ ವಿಪರೀತ ಥಂಡಿಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀಡುತ್ತದೆ ಎನ್ನುತ್ತಾರೆ ಪೋಷಕರು.

ಮಂದ ಬೆಳಕಿನ ತಗಡಿನ ಶೆಡ್‍ ಆಶ್ರಯ ಪಡೆದು ಚಳಿಯಲ್ಲಿ ನಿತ್ಯ ಅಧ್ಯಯನ ಮಾಡುವ ದುಃಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಭೇಟಿ ನೀಡುತ್ತಾರೆ. ಆದರೆ, ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಇದುವರೆಗೂ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ. ವಸತಿ ಬಾಡಿಗೆ ಕಟ್ಟಡ ಜಮೀನಿನಲ್ಲಿದೆ. ಸುತ್ತಲಿನ ಜಮೀನುಗಳಲ್ಲಿನ ಬೆಳೆಗೆ ರೈತರು ನಿತ್ಯ ನೀರು ಹಾಯಿಸುತ್ತಾರೆ. ನೀರಿನ ತಂಪು ವಾತಾವರಣದೊಂದಿಗೆ ಬೇರೆತು ಚಳಿಯ ತೀವ್ರ ಹೆಚ್ಚಾಗುತ್ತದೆ. ಶೆಡ್‌ನಲ್ಲಿ ಆಶ್ರಯ ಪಡೆದಿರುವುದರಿಂದ ಥಂಡಿ ತಡೆಯುವಂತಹ ಸಾಮರ್ಥ್ಯ ಗೋಡೆಗಳಿಗೆ ಇಲ್ಲ. ಮೈಕೊರೆಯುವ ಚಳಿಯಲ್ಲೇ ತಣ್ಣೀರು ಸ್ನಾನ ಮಾಡಿದರೇ ಮೈಯೆಲ್ಲ ಥರಗುಟ್ಟುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಸೌಲಭ್ಯ ಕೊರತೆಯ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನೆಯಾಗಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಕಲಿಕಾ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳು ಸಹ ನೀಡುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.