
ಔರಾದ್: ತಮಗೆ ಖಾಯಂ ನಿವೇಶನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಲೆಮಾರಿಗಳು ಇಲ್ಲಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಗುರುವಾರ 11ನೇ ದಿನಕ್ಕೆ ತಲುಪಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಬುಧವಾರ ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರನ್ನು ಭೇಟಿ ಔರಾದ್ ಅಲೆಮಾರಿ ಜನರಿಗೆ ಸರ್ವೆ ನಂಬರ್ 183ರಲ್ಲಿ ನಿವೇಶನ ಕಲ್ಪಿಸುವಂತೆ ಮನವರಿಕೆ ಮಾಡಿಕೊಟ್ಟರು.
2019ರಲ್ಲಿ ಅಲೆಮಾರಿ ಜನರಿಗೆ ನಿವೇಶನ ಕಲ್ಪಿಸಲು ಸರ್ವೆ ನಂಬರ್ 183ರಲ್ಲಿ 2 ಎಕರೆ ಜಮೀನು ಮಂಜೂರಾಗಿದೆ. ಆದರೆ ಈಗ ಬೇರೆ ಕಡೆ ಜಾಗ ಕೊಡುತ್ತಿದ್ದಾರೆ. ಅದಕ್ಕೆ ಅಲೆಮಾರಿ ಜನ ಒಪ್ಪಲು ತಯಾರಿಲ್ಲ. ಹೀಗಿ ಅವರಿಗೆ ವಾಸವಾಗಲು ಯೋಗ್ಯವಾದ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಔರಾದ್ ಸರ್ವೆ ನಂಬರ್ 183 ಬದಲು ಸರ್ವೆ ನಂಬರ್ 205ರಲ್ಲಿ ಅಲೆಮಾರಿಗಳಿಗೆ ನಿವೇಶನ ಕೊಡುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಸರ್ವೆ ನಂಬರ್ 205 ಊರು ಬಿಟ್ಟು ದೂರ ಇದೆ. ಹೀಗಾಗಿ ಊರಿಗೆ ಸಮೀಪದ ಸರ್ವೆ ನಂಬರ್ 183ರಲ್ಲೇ ನಿವೇಶನ ಕೊಡುವಂತೆ ನಾವು ಬೇಡಿಕೆ ಮಂಡಿಸಿದ್ದೇವೆ. ಆದರೆ ನಮ್ಮ ಬೇಡಿಕೆಗೆ ಸ್ಪಂದಿಸಲು ಜಿಲ್ಲಾಡಳಿತ ತಯಾರಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ರಾಹುಲ್ ಖಂದಾರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.