ADVERTISEMENT

ಕಾಂಗ್ರೆಸ್‌ - ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ: ಲಾಠಿ ಪ್ರಹಾರ

ಚಿಂತಾಕಿಯಲ್ಲಿ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 12:46 IST
Last Updated 23 ಏಪ್ರಿಲ್ 2019, 12:46 IST
   

ಬೀದರ್‌: ಔರಾದ್‌ ತಾಲ್ಲೂಕಿನ ಚಿಂತಾಕಿಯಲ್ಲಿ ಮಂಗಳವಾರ ಮತದಾರರ ಮನವೊಲಿಸುವ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕಲ್ಲು ತೂರಾಟದಲ್ಲಿ ನಾಲ್ವರಿಗೆ ಗಾಯಗಳಾಗಿವೆ.

ಚಿಂತಾಕಿಯ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಮೂರು ಮತಗಟ್ಟೆಗಳ ಪೈಕಿ 117ನೇ ಮತಗಟ್ಟೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಭೇಟಿ ನೀಡಿ ಅಲ್ಲಿನ ಮತದಾನ ಪ್ರಮಾಣ ವಿಚಾರಿಸಿ ಹೋಗಿದ್ದರು.

ಚಿಂತಾಕಿ ಮತಗಟ್ಟೆಯಲ್ಲಿ ಮತ ಇಲ್ಲದಿದ್ದರೂ ಗೀತಾ ಚಿದ್ರಿ ಅಕ್ರಮವಾಗಿ ಮತಗಟ್ಟೆ ಪ್ರವೇಶ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಸಮಯದಲ್ಲಿ ಅಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಸೇರಿದರು.

ADVERTISEMENT

ಚಿಂತಾಕಿ ಠಾಣೆಯ ಪಿಎಸ್‌ಐ ಪಿಎಸ್‌ಐ ಸ್ಥಳಕ್ಕೆ ಬಂದು ಮತಗಟ್ಟೆ ಆವರಣದಿಂದ ಕಾರ್ಯಕರ್ತರನ್ನು ಹೊರಗೆ ಕಳಿಸುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಿದರು. ಇದರಿಂದ ನಾಲ್ವರು ಗಾಯಗೊಂಡರು. ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಪೊಲೀಸರು ಲಘುಲಾಠಿ ಪ್ರಹಾರ ಮಾಡಿ ಕಾರ್ಯಕರ್ತರನ್ನು ಚದುರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಶಾಂತಿ ನೆಲೆಸುವಂತೆ ಮಾಡಿದರು. ನಂತರ ಶಾಂತಿಯುತವಾಗಿ ಮತದಾನ ನಡೆಯಿತು.

****
ಎರಡು ಕಡೆ ಮತದಾನ ಬಹಿಷ್ಕಾರ: ಬೀದರ್ ಜಿಲ್ಲೆಯ ಎರಡು ಗ್ರಾಮಗಳ ಗ್ರಾಮಸ್ಥರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತದಾನಕ್ಕೆ ಬಹಿಷ್ಕಾರ ಹಾಕಿದರು.

ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಬೀದರ್‌ ತಾಲ್ಲೂಕಿನ ಸುಲ್ತಾಪುರ ಗ್ರಾಮಸ್ಥರು ಮತದಾನದಿಂದ ದೂರ ಉಳಿದರು.

ಬೀದರ್ ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಮಾಡಿದರೂ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಿಲ್ಲ. ಗ್ರಾಮಸ್ಥರು ಮತಗಟ್ಟೆಯ ಸಮೀಪದ ವೃತ್ತದಲ್ಲಿ ಕುಳಿತಿದ್ದರೂ ಸಂಜೆಯ ವರೆಗೆ ಮತದಾನ ಮಾಡಲಿಲ್ಲ.

ಭಾಲ್ಕಿ ತಾಲ್ಲೂಕಿನ ಕುರನಳ್ಳಿಯಲ್ಲಿ ಗ್ರಾಮಸ್ಥರು ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 11 ಗಂಟೆಯ ವರೆಗೂ ಮತದಾರರು ಮತ ಹಾಕಲು ಬಾರದಿದ್ದಾಗ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ತಹಶೀಲ್ದಾರ್ ಅಣ್ಣಾರಾವ್‌ ಪಾಟೀಲ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.