ADVERTISEMENT

ಸ್ಪರ್ಶ ಕುಷ್ಠರೋಗ ಜಾಗೃತಿ ಜಾಥಾ

ಬಹುಔಷಧಿ ಚಿಕಿತ್ಸೆಯಿಂದ ಕುಷ್ಠರೋಗ ಗುಣ: ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 14:29 IST
Last Updated 30 ಜನವರಿ 2019, 14:29 IST
ಮಹಾತ್ಮ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಬೀದರ್‌ನಲ್ಲಿ ಬುಧವಾರ ಸ್ಪರ್ಶ ಕುಷ್ಠರೋಗ ಜಾಗೃತಿ ಜಾಥಾ ನಡೆಯಿತು
ಮಹಾತ್ಮ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಬೀದರ್‌ನಲ್ಲಿ ಬುಧವಾರ ಸ್ಪರ್ಶ ಕುಷ್ಠರೋಗ ಜಾಗೃತಿ ಜಾಥಾ ನಡೆಯಿತು   

ಬೀದರ್: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಅಂಗವಾಗಿ ನಗರದಲ್ಲಿ ಬುಧವಾರ ಸ್ಪರ್ಶ ಕುಷ್ಠರೋಗ ಜಾಗೃತಿ ಜಾಥಾ ನಡೆಯಿತು.

‘ಕೈ ಕೈ ಜೋಡಿಸಿ ಕುಷ್ಠ ನಿವಾರಿಸಿ’ ಘೋಷ ವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಆರಂಭವಾದ ವಾಹನಗಳ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿತು.

ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ‘ಕುಷ್ಠರೋಗವನ್ನು ಬಹುಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದು’ ಎಂದು ಹೇಳಿದರು.

ADVERTISEMENT

‘ಚರ್ಮ ಹಾಗೂ ನರಕ್ಕೆ ಸಂಬಂಧಿಸಿದ ಕುಷ್ಠರೋಗವು ಸಾಂಕ್ರಾಮಿಕ ರೋಗವಾಗಿದೆ. ದೇಹದ ಮೇಲೆ ಯಾವುದೇ ರೀತಿಯ ಮಚ್ಚೆ ಕಂಡು ಬಂದರೆ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ಮಾತನಾಡಿ, ‘ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಭಾರತವನ್ನು ಕುಷ್ಠರೋಗ ಮುಕ್ತಗೊಳಿಸಬಹುದು’ ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ರಾಜಶೇಖರ ಪಾಟೀಲ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ದಿನವನ್ನು ರಾಷ್ಟ್ರೀಯ ಕುಷ್ಠರೋಗ ದಿನವಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯನ್ನು ಕುಷ್ಠರೋಗ ಮುಕ್ತಗೊಳಿಸಲು ಎಲ್ಲರೂ ಪಣ ತೊಡಬೇಕು’ ಎಂದು ಹೇಳಿದರು.

ಕುಷ್ಠರೋಗದ ಕುರಿತು ಅಧಿಕಾರಿಗಳು, ಸಾರ್ವಜನಿಕರಿಗೆ ಪ್ರತಿಜ್ಞೆ ಬೋಧಿಸಲಾಯಿತು. ಕುಟುಂಬ ಕಲ್ಯಾಣ ಅಧಿಕಾರಿ ಡಾ. ಇಂದುಮತಿ ಪಾಟೀಲ, ಡಾ. ದೀಪಾ ಖಂಡ್ರೆ, ಡಾ. ಅನಿಲ ಚಿಂತಾಮಣಿ, ಡಾ. ಸಂಗಾರೆಡ್ಡಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಕಚೇರಿಯ ಮೇಲ್ವಿಚಾರಕ ವೀರಶೆಟ್ಟಿ ಚನಶೆಟ್ಟಿ, ಸುನೀಲ ಶರ್ಮಾ, ಡಾ. ಅಭಿಜೀತ್ ಪಟೀಲ, ರಾಜೇಶ, ಶಾಮರಾವ್, ರಮೇಶ ಇಮ್ಯಾನುಯೇಲ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.