ADVERTISEMENT

ಸಾಹಿತಿಗಳಿಗೆ ಲೌಕಿಕ ದಾಹಕ್ಕಿಂತ ಜ್ಞಾನದ ದಾಹ ಇರಲಿ: ರಜಿಯಾ ಬಳಬಟ್ಟಿ

ಸಾಹಿತಿ ರಜಿಯಾ ಬಳಬಟ್ಟಿ ನುಡಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:17 IST
Last Updated 7 ಫೆಬ್ರುವರಿ 2021, 15:17 IST
ಬೀದರ್‌ನ ಬಸವಕೇಂದ್ರದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ರಜಿಯಾ ಬಳಬಟ್ಟಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಬಸವಕೇಂದ್ರದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ರಜಿಯಾ ಬಳಬಟ್ಟಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಸಾಹಿತಿಗಳಿಗೆ ಪ್ರಶಸ್ತಿ, ಗೌರವ ಮೊದಲಾದ ಲೌಕಿಕ ದಾಹಕ್ಕಿಂತ ಜ್ಞಾನದ ದಾಹ ಇರಬೇಕು’ ಎಂದು ಸಾಹಿತಿ ರಜಿಯಾ ಬಳಬಟ್ಟಿ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಬಸವಕೇಂದ್ರದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಲ್ಯದಿಂದಲೆ ಸಾಹಿತ್ಯದ ಗೀಳು ಇತ್ತು, ಸಿದ್ದ ಚೌಕಟ್ಟನ್ನು ಮೀರಿ ಬದುಕನ್ನು ಮೆಟ್ಟಿ ನಿಂತವಳು. ಎಂ.ಎಂ. ಕಲಬುರ್ಗಿ ಪ್ರಭಾವದಿಂದಾಗಿ ಬಸವಣ್ಣ ಅಧ್ಯಯನ ಮಾಡಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿ, ಒಡನಾಟದಿಂದಾಗಿ ಸಾಹಿತ್ಯ ರಚನೆಗೆ ತೊಡಗಿದೆ, ಡಾ.ಮಲ್ಲಿಕಾ ಘಂಟಿ ನೆರವು ಹಾಗೂ ಇಟ್ಟಣ್ಣನವರ ಪ್ರಭಾವದಿಂದ ಕನ್ನಡದ ಪ್ರೀತಿ ಬೆಳೆಸಿಕೊಂಡೆ. ಹಾಗಾಗಿಯೇ ಮೆಹಂದಿ, ದಾವಣಿ ಹುಡಗಿ, ಬಿಸಿಲೂರು, ಆಸರಕಿ ಬ್ಯಾಸರಕಿ ಇತ್ಯಾದಿ ಪುಸ್ತಕ ಹೊರತರಲು ಸಾಧ್ಯವಾಯಿತು’ ಎಂದು ತಿಳಿಸಿದರು.

ADVERTISEMENT

ಸಾಹಿತಿ ಭಾರತಿ ವಸ್ತ್ರದ ಹಾಗೂ ರಾಜಮ್ಮ ಚಿಕಪೇಟೆ ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ದೊಡ್ಡದು. ಮೆಹಂದಿಯ ತಲ್ಲಣ ಇವಾಗ ಇಲ್ಲ. ಸಾಮಾಜಿಕ ಸಂವೇದನೆ ಈಗಿನ ಅಗತ್ಯವಾಗಿದೆ. ಸಾಹಿತ್ಯ ಸಮಾಜಮುಖಿಯಾಗಬೇಕು. ಬರೆದದ್ದೆಲ್ಲ ಮುದ್ರಣವಾಗಬೇಕೆಂಬ ಹಟ ನನಗಿಲ್ಲ. ಏಕೆಂದರೆ ಸಾಹಿತ್ಯ ಶಬ್ದಗಳ ಜಾಲ ಅಲ್ಲ. ಅದಕ್ಕೆ ಬೇಕಾದ ಸಂವೇದನಾಶೀಲತೆಯುಳ್ಳ ಭಾವನೆ ದೂಡಿಸಿಕೊಳ್ಳಬೇಕು’ ಎಂದರು.

ಬೀದರ್ ಜಿಲ್ಲಾ 19ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಸಾಹಿತಿ ಎಸ್.ಎಂ. ಜನವಾಡಕರ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, :ಮಾತೃ ಭಾವನೆಯಿಂದ ಮಾತ್ರ ಜ್ಞಾನದ ಗ್ರಹಿಕೆ ಸಾಧ್ಯ. ಅದು ಮನುಷ್ಯರ ಆಂತರಿಕ ವಿಕಾಸಕ್ಕೆ ಕಾರಣವಾಗುತ್ತದೆ. ಓದು ಬರಹ ಸಂವಾದದ ಮೂಲಕ ಸಮೃದ್ಧ ಸಾಹಿತ್ಯ ಸಾಧ್ಯ’ ಎಂದರು.

‘ರಾಷ್ಟ್ರ ನಿರ್ಮಾಣದಲ್ಲಿ ಸಾಹಿತಿಗಳ ಪಾತ್ರ ದೊಡ್ಡದು ವೈಚಾರಿಕ, ಪ್ರಗತಿಪರ ಚಿಂತನೆ, ಮಾನವೀಯ ಮೌಲ್ಯಗಳ ಬೆಳೆಸಿಕೊಂಡವರು ಮಾತ್ರ ಉತ್ತಮ ಸಾಹಿತ್ಯ ರಚಿಸಲು ಸಾಧ್ಯ. ಅಂಥ ಗಟ್ಟಿ ಸಾಹಿತ್ಯ ಕೊಟ್ಟವರು ರಜಿಯಾ ಬಳಬಟ್ಟಿ’ ಎಂದು ಅಭಿಪ್ರಾಯ ಪಟ್ಟರು

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಬೀದರ್‌ ನಲ್ಲಿ ಒಂದು ಸಾಹಿತ್ಯ ಹಾಗೂ ಸಾಂಸ್ಕತಿಕ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಸಾಹಿತಿಗಳಿಗೆ ವೇದಿಕೆ ಒದಗಿಸಿ ಕೊಡುವುದೇ ಸಾಹಿತ್ಯ ಪರಿಷತ್ತಿ ಕರ್ತವ್ಯವಾಗಿದ್ದು ಅದನ್ನು ಸಾಧ್ಯವಾಗಿಸಿದ ತೃಪ್ತಿ ನನಗಿದೆ’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ’ರಜಿಯಾ ಅಕ್ಕನವರ ಜೀವನ ಸಾಧನೆ ಮಹಿಳಾ ಲೋಕಕ್ಕೆ ಮಾದರಿಯಾಗಿದೆ’ ಎಂದು ನುಡಿದರು.

ಬಸವಕೇಂದ್ರದ ಮಹಿಳಾ ಘಟಕದ ಗೌರವಾಧ್ಯಕ್ಷ ಕರುಣಾ ಶಟಕಾರ ಮಾತನಾಡಿದರು.
ಸಾಹಿತಿಗಳಾದ ಚನ್ನಬಸವ ಹೇಡೆ, ಜಗನ್ನಾಥ ಕಮಲಾಪುರೆ, ಸಿದ್ದಾರೆಡ್ಡಿ ನಾಗೂರೆ, ದೇವೇಂದ್ರ ಕರಂಜೆ, ಬಾಲಾಜಿ ಬಿರಾದಾರ, ಶಿವಶಂಕರ ಟೋಕರೆ, ಓಂಪ್ರಕಾಶ ದಡ್ಡೆ, ಮಲ್ಲಿಕಾರ್ಜುನ ನಿಂಗದಳ್ಳಿ, ವಿದ್ಯಾವತಿ ಬಲ್ಲೂರ, ಶಿವರಾಜ ಪಾಟೀಲ ಇದ್ದರು.
ಕಸ್ತೂರಿ ಪಟಪಳ್ಳಿ ಸ್ವಾಗತಿಸಿದರೆ, ಟಿ.ಎಂ.ಮಚ್ಚೆ ನಿರೂಪಿಸಿದರು. ರಾಜಕುಮಾರ ಅಲ್ಲೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.