ADVERTISEMENT

ಶೈಕ್ಷಣಿಕ ಪಠ್ಯಕ್ರಮ ಉದ್ಯಮ ಕೇಂದ್ರೀಕೃತವಾಗಿರಲಿ: ಥಾವರ್‌ಚಂದ್ ಗೆಹಲೋತ್

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 11:25 IST
Last Updated 28 ಏಪ್ರಿಲ್ 2022, 11:25 IST
ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿದರು
ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿದರು   

ಬೀದರ್‌: ಶೈಕ್ಷಣಿಕ ಪಠ್ಯಕ್ರಮವು ಕ್ರಿಯಾತ್ಮಕ, ವಿಶ್ವದ ಅತ್ಯುತ್ತಮ ಸಂಸ್ಥೆಗಳಿಗೆ ಸಮಾನ ಹಾಗೂ ಉದ್ಯಮ ಕೇಂದ್ರೀತವಾಗಿರಬೇಕು. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯವು ಉದ್ಯಮ ಹಾಗೂ ಉದ್ಯಮ ಸಂಘಗಳೊಂದಿಗೆ ಸಂಪರ್ಕ ಹೊಂದಿರಲು ಕೈಗಾರಿಕೆ ಮುಖಾಮುಖಿ ಘಟಕ ಸ್ಥಾಪಿಸುವುದು ಒಳ್ಳೆಯದು ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಲಹೆ ನೀಡಿದರು.

ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಜಿಟಲ್ ತರಗತಿಗಳು ಶಿಕ್ಷಕರು ಕಲಿಸುವ ಮತ್ತು ವಿದ್ಯಾರ್ಥಿಗಳು ಕಲಿಯುವ ವಿಧಾನವನ್ನು ಬದಲಾಯಿಸುತ್ತಿವೆ. ಇಂದಿನ ಇಂಟರ್ನೆಟ್, ಸ್ಮಾರ್ಟ್ ಫೋನ್ ಮತ್ತು ಇತರ ಸಾಧನಗಳ ಯುಗದಲ್ಲಿ ಡಿಜಿಟಲ್ ತರಗತಿಯು ಜ್ಞಾನ ಹಂಚಿಕೆ ಮತ್ತು ಪ್ರಸರಣ ಕ್ಷೇತ್ರದಲ್ಲಿ ತಾರ್ಕಿಕ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ADVERTISEMENT

ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ಗುಣಮಟ್ಟದ ಉಪನ್ಯಾಸಗಳನ್ನು ನೀಡಲು ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ತಲುಪಲು ಡಿಜಿಟಲ್ ತರಗತಿಗಳು ನಮಗೆ ಹೇಗೆ ಸಹಾಯ ಮಾಡುತ್ತವೆ ಎನ್ನುವುದನ್ನು ನೋಡಬೇಕಾಗಿದೆ ಎಂದರು.

ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಭಾರತ ಸರ್ಕಾರವು ‘ಸ್ಟಾರ್ಟ್-ಅಪ್ ಇಂಡಿಯಾ’ ಅಭಿಯಾನ ಪ್ರಾರಂಭಿಸಿದೆ. ಪದವೀಧರ ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆದು ಸ್ವಯಂ ಉದ್ಯಮಿಗಳಾಗಬೇಕು. ಇನ್ನುಳಿದವರಿಗೂ ಉದ್ಯೋಗ ಕೊಡುವಂಥ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಭಾರತಕ್ಕೆ ಉದ್ಯೋಗಾಕಾಂಕ್ಷಿಗಳ ಅಗತ್ಯವಿಲ್ಲ. ನಮಗೆ ಉದ್ಯೋಗ ನೀಡುವವರು ಮತ್ತು ಉದ್ಯೋಗ ಸೃಷ್ಟಿಕರ್ತರು ಬೇಕು. ಭಾರತ ಸೂಪರ್ ಪವರ್ ಆಗಬೇಕಾದರೆ ಎಲ್ಲ ವಿಭಾಗಗಳಲ್ಲಿ ಚಿಂತಕರನ್ನು ಹುಟ್ಟು ಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ಈ ದೇಶದ ಗತವೈಭವವನ್ನು ಅದರ ಗುಣ, ನಾವೀನ್ಯತೆ ಮತ್ತು ಸಮಾಜ ಸೇವೆಗಳ ಮೂಲಕ ಪುನರುಜ್ಜೀವನಗೊಳಿಸುವ ಮತ್ತು ಮರು ಪಡೆಯುವ ಸಮಯ ಬಂದಿದೆ. ಸಮಾಜ ಮತ್ತು ಮಾನವೀಯತೆಯ ಪ್ರಯೋಜನಕ್ಕಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಧಾರೆ ಎರೆಯಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು 2040ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.