ADVERTISEMENT

ಬಸವ ತತ್ವ ಪ್ರಚಾರಕ್ಕೆ ಜೀವನ ಮೀಸಲು: ಶಿವಾನಂದ ಸ್ವಾಮೀಜಿ

ವಿ.ಕೆ. ಇಂಟರ್‌ ನ್ಯಾಷನಲ್ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:52 IST
Last Updated 23 ನವೆಂಬರ್ 2020, 16:52 IST
ಬೀದರ್‌ನ ವಿ.ಕೆ. ಇಂಟರ್‌ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ವಿ.ಕೆ. ಇಂಟರ್‌ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಬಸವ ತತ್ವ ಪ್ರಚಾರಕ್ಕಾಗಿಯೇ ಜೀವನ ಮೀಸಲು ಇಟ್ಟಿದ್ದೇನೆ’ ಎಂದು ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ನುಡಿದರು.

ದೇಶದಾದ್ಯಂತ ಬಸವ ಜ್ಯೋತಿ ಸದ್ಭಾವನಾ ಯಾತ್ರೆ ಕೈಗೊಂಡ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಭಾ, ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು, ವಿ.ಕೆ. ಇಂಟರ್‌ ನ್ಯಾಷನಲ್ ಶಾಲಾ ಕಾಲೇಜುಗಳ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಇರುವ ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಬಸವಾದಿ ಶರಣರ ತತ್ವಗಳು ವಿಶ್ವದಾದ್ಯಂತ ಪಸರಿಸಬೇಕು ಎನ್ನುವುದೇ ತಮ್ಮ ಆಶಯವಾಗಿದೆ’ ಎಂದು ಹೇಳಿದರು.

ADVERTISEMENT

‘ಬಸವ ತತ್ವವು ನೈತಿಕ, ಮಾನವೀಯ ಹಾಗೂ ಜೀವನ ಮೌಲ್ಯಗಳನ್ನು ಒಳಗೊಂಡಿದೆ. ಇದರಲ್ಲಿ ವಿಶ್ವದ ಸರ್ವ ಸಮಸ್ಯೆಗಳಿಗೂ ಪರಿಹಾರ ಅಡಕವಾಗಿದೆ. ಬಸವ ತತ್ವ ಪ್ರಚಾರಕ್ಕಾಗಿ ದೇಶದಾದ್ಯಂತ ನಡೆಸಿದ 22 ಸಾವಿರ ಕಿ.ಮೀ. ಪಾದಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಯಾತ್ರೆಯ ವೇಳೆ ಜನ ಆದರದಿಂದ ಸ್ವಾಗತಿಸಿ, ಬರಮಾಡಿಕೊಂಡು ಬಸವ ತತ್ವದ ಬಗ್ಗೆ ತಮಗಿರುವ ಗೌರವವನ್ನು ತೋರಿಸಿದ್ದಾರೆ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ‘ಬಸವ ತತ್ವ ಪ್ರಚಾರಕ್ಕಾಗಿ ಶಿವಾನಂದ ಸ್ವಾಮೀಜಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ನಡೆಸಿರುವುದು ಅವಿಸ್ಮರಣೀಯ’ ಎಂದರು.

‘ಶ್ರೀಗಳು ಕಾಡುವ, ಬೇಡುವ ಜಂಗಮರಾಗಿರದೆ, ಸತ್ಯ ಶುದ್ಧ ಕಾಯಕದಿಂದ ಬಂದ ಹಣವನ್ನು ಸಮಾಜೋಧಾರ್ಮಿಕ ಕಾರ್ಯಗಳಿಗೆ ಬಳಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಬಸವ ತತ್ವ ಶಿಕ್ಷಣ ಸಂಸ್ಥೆಯು ಅನಾಥ, ನಿರ್ಗತಿಕ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುತ್ತಿದೆ. ಇತರ ವಿದ್ಯಾರ್ಥಿಗಳಿಗೂ ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಒದಗಿಸುತ್ತಿದೆ’ ಎಂದು ತಿಳಿಸಿದರು.

‘ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಕುರಿತು ಯಾರಾದರೂ ಮಹಾ ಪ್ರಬಂಧ (ಪಿಎಚ್‍.ಡಿ) ಮಂಡಿಸಲು ಆಸಕ್ತಿ ತೋರಿದರೆ ಮಾರ್ಗದರ್ಶನ ಮಾಡಲು ಸಿದ್ಧನಿದ್ದೇನೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಶಿವಕುಮಾರ ಉಪ್ಪೆ ಹೇಳಿದರು.

ಆರ್ಕಿಟೆಕ್ಟ್ ಸಂತೋಷ ಸುಂಕದ ಅವರಿಗೆ ಅತ್ಯುತ್ತಮ ವಾಸ್ತುಶಿಲ್ಪಿ ಹಾಗೂ ಶಿವಕುಮಾರ ಉಪ್ಪೆ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಯಗಾಂವದ ಶಿವಾನಂದ ಸ್ವಾಮೀಜಿ, ಬೀದರ್ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ, ನಿರ್ದೇಶಕಿಯರಾದ ಲಕ್ಷ್ಮೀಬಾಯಿ ಕಮಠಾಣೆ, ವೈಶಾಲಿ ಕಮಠಾಣೆ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಚಿನ್ನಮ್ಮ ಬಾವಗೆ, ಸದಸ್ಯೆ ಶಿವಲೀಲಾ ಟೊಣ್ಣೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಮಾನಶೆಟ್ಟಿ ಬೆಳಕೇರಿ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುರಾವ್ ಬಿರಾದಾರ, ಡಾ. ವಿಠ್ಠಲ ರೆಡ್ಡಿ, ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಉಪ ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್‌ ನ್ಯಾಷನಲ್ ಶಾಲೆ ಆಡಳಿತಾಧಿಕಾರಿ ಜೇನ್ಸ್ ಥಾಮಸ್, ಉಪನ್ಯಾಸಕರಾದ ರವಿ ದೇವಾ, ಜಗದೀಶ ಹಿಬಾರೆ, ಪ್ರದೀಪ ಗಾಜಲ್ ಇದ್ದರು.

ಮಹಮ್ಮದ್ ಯುನೂಸ್ ನಿರೂಪಿಸಿದರು. ನಾಗೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.