ADVERTISEMENT

ಬಸವಕಲ್ಯಾಣ: ಕೂಡಲಸಂಗಮದೇವ ವಚನಾಂಕಿತ ಬದಲಾವಣೆಗೆ ಸಂತಸ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 7:55 IST
Last Updated 29 ಡಿಸೆಂಬರ್ 2021, 7:55 IST
ಮಾತೆ ಗಂಗಾದೇವಿ
ಮಾತೆ ಗಂಗಾದೇವಿ   

ಬಸವಕಲ್ಯಾಣ: ಇನ್ನು ಮುಂದೆ ಲಿಂಗದೇವ ಬದಲಿಗೆ ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮದೇವ ವಚನಾಂಕಿತ ಬಳಸಲಾಗುವುದು ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಪ್ರಕಟಿಸಿದ್ದರಿಂದ ಇಲ್ಲಿನ ಬಸವಪರ ಸಂಘಟನೆಯವರು, ಸಂಘ- ಸಂಸ್ಥೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮನ್ನಿಸಿ ಇನ್ನು ಮುಂದೆ ಎಲ್ಲೆಡೆ ಕೂಡಲಸಂಗಮದೇವ ಎಂದೇ ಬಳಸುವುದಾಗಿ ಮಾತೆ ಗಂಗಾದೇವಿಯವರು ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಬಸವತತ್ವದ ಪ್ರಚಾರ ಮತ್ತು ಪ್ರಸಾರ ಕಾರ್ಯಕ್ಕೆ ಇನ್ನಷ್ಟು ವೇಗ ದೊರಕಲಿದೆ’ ಎಂದು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ಹೇಳಿದ್ದಾರೆ.

‘ಬಸವಣ್ಣನವರ ವಚನಾಂಕಿತ ಬದಲಾಯಿಸಿದ ಕಾರಣದಿಂದ ಬಸವಪರ ಸಂಘಟನೆಗಳಲ್ಲಿ ಬಿರುಕು ಬಂದಿತ್ತು. ಆದರೆ, ಈಗ ಮಾತೆ ಗಂಗಾದೇವಿಯವರು ತಪ್ಪು ಸರಿಪಡಿಸುವ ಘೋಷಣೆ ಮಾಡಿದ್ದರಿಂದ ಸಂತಸವಾಗಿದೆ. ಇದರಿಂದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಆನೆಬಲ ಬರಲಿದೆ’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಈ ಬಗ್ಗೆ ಪ್ರಕಟಣೆ ಹೊರಡಿಸಿ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಶರಣು ಸಲಗರ ಅವರು, ಮೂಲ ಅಂಕಿತನಾಮ ಬಳಕೆಗೆ ಮಾತೆ ಗಂಗಾದೇವಿಯವರು ಒಪ್ಪಿರುವುದರಿಂದ ಹರ್ಷವಾಗಿದೆ. ಇದರಿಂದ ಲಿಂಗಾಯತ ಸಮಾಜದ ಸಂಘಟನೆ ಬಲಗೊಳ್ಳಲು ಹಾಗೂ ಬಸವತತ್ವ ಪ್ರಚಾರ ಕಾರ್ಯ ತೀವ್ರಗತಿಯಲ್ಲಿ ಆಗಲು ಸಹಾಯ ಆಗಲಿದೆ ಎಂದಿದ್ದಾರೆ. ಮುಖಂಡರಾದ ಪ್ರದೀಪ ವಾತಡೆ, ರವಿ ಕೊಳಕೂರ, ಶಿವಕುಮಾರ ಬಿರಾದಾರ ಕೂಡ ಮಾತೆ ಗಂಗಾದೇವಿಯವರು ತೆಗೆದುಕೊಂಡ ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಪಟ್ಟದ್ದೇವರು, ಖಂಡ್ರೆ ಸ್ವಾಗತ

ಭಾಲ್ಕಿ: ಬಸವಣ್ಣನವರ ವಚನಗಳಲ್ಲಿ ಲಿಂಗದೇವ ಬದಲಿಗೆ ಕೂಡಲಸಂಗಮದೇವ ಅಂಕಿತನಾಮ ಬಳಸುವುದಾಗಿ ಬಸವಧರ್ಮ ಪೀಠದ ಜಗದ್ಗುರು ಮಾತೆ ಗಂಗಾ ಮಾತಾಜಿ ಘೋಷಣೆ ಮಾಡಿರುವುದು ಹರ್ಷದ ಸಂಗತಿ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾ ಮಾತಾಜಿ ಅವರ ನಿರ್ಧಾರದಿಂದ ಸಮಸ್ತ ಬಸವಭಕ್ತರ ಅಂತರಾಳದ ಮಹದಾಸೆ ಈಡೇರಿದ್ದು, ಈ ನಿರ್ಧಾರದ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ, ಬಸವಭಕ್ತರ ಸಂಘಟನೆಗೆ ಮತ್ತಷ್ಟು ಬಲ ತುಂಬಿದ್ದಾರೆ ಎಂದು ತಿಳಿಸಿದ್ದಾರೆ.

ಖಂಡ್ರೆ ಸ್ವಾಗತ: ಬಸವಣ್ಣನವರ ವಚನಗಳಿಗೆ ಕೂಡಲ ಸಂಗಮದೇವ ವಚನಾಂಕಿತ ಬಳಸುವ ನಿರ್ಧಾರ ಕೈಗೊಂಡಿರುವ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಇದೊಂದು ಒಳ್ಳೆಯ ಬೆಳವಣಿಗೆ. ಈ ಒಂದು ಹೇಳಿಕೆಯಿಂದ ಧರ್ಮ, ಸಮುದಾಯ ಒಗ್ಗೂಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.