ಬಸವಕಲ್ಯಾಣ: ‘ಸನಾತನಿಗಳ ಕೃಪಾಪೋಷಿತರು ಬಸವಣ್ಣನವರಿಗೆ ಕೇಡು ಬಯಸುತ್ತಿದ್ದಾರೆ. ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಹ ಅದೇ ಸಾಲಿನವರು ಆಗಿರುವುದರಿಂದ ಅವರಿಂದ ಬಸವಣ್ಣನವರ ಬಗ್ಗೆ ಅಪಶಬ್ದಗಳು ಹೊರ ಹೊಮ್ಮಿವೆ’ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.
ನಗರದ ಎಂ.ಎಂ.ಬೇಗ್ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಬಸವದಳ, ಲಿಂಗಾಯತಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಭಿಮಾನಿ ಕಲ್ಯಾಣ ಪರ್ವದ ಸಮಾರೋಪದಲ್ಲಿ ಮಾತನಾಡಿದರು.
‘ಬಸವ ಸಂಸ್ಕೃತಿ ಅಭಿಯಾನ ನಡೆಸಿದವರನ್ನು ಅವರು ಮುಖ್ಯಮಂತ್ರಿಗಳ ಕೃಪಾಪೋಷಿತರು ಎಂದು ಅಪಾದಿಸಿರುವುದು ಸರಿಯಲ್ಲ. ಬಸವಣ್ಣನವರ ಸಿದ್ಧಾಂತದ ಆಚರಣೆ, ಅನುಕರಣೆ ಆಗಬೇಕು. ಮಾತೆ ಮಹಾದೇವಿಯವರು ಸಂಶೋಧನೆ, ಅವಿಷ್ಕಾರಕ್ಕೆ ಮಹತ್ವ ನೀಡಿದ್ದರು. ಪ್ರಾಮಾಣಿಕತೆ, ಬದ್ಧತೆ, ಪಾರದರ್ಶಕತೆ ಅವರಲ್ಲಿತ್ತು. ಪ್ರವಾದಿಯಾದವರು ಪ್ರಯೋಗಕ್ಕೆ ಒಳಪಟ್ಟು ಸತ್ಯ ಬಿಚ್ಚಿಡುತ್ತಾರೆ. ಅದರಂತೆಯೇ ಮಾತಾಜಿ ಸಹ ಲಿಂಗದೇವರನ್ನು ಕೊಟ್ಟಿದ್ದಾರೆ. ಲಿಂಗಾಯತ ಧರ್ಮಕ್ಕೆ ಅಗತ್ಯವಾದ ಚೌಕಟ್ಟು ನಿರ್ಮಿಸಿದ್ದಾರೆ. ಈ ಧರ್ಮ ಮಾನ್ಯತೆಯ ಹೋರಾಟ ತೀವ್ರಗೊಳ್ಳಬೇಕಿದೆ’ ಎಂದರು.
ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ,‘ರಾಷ್ಟ್ರೀಯ ಬಸವದಳ ಇಂದಿಗೂ ಗಟ್ಟಿಯಾಗಿರಲು ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿಯವರ ಪರಿಶ್ರಮ ಮತ್ತು ಕಾರ್ಯಕರ್ತರಲ್ಲಿನ ಧರ್ಮಶ್ರದ್ಧೆ, ತತ್ವನಿಷ್ಠೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಸಂಘಟನೆಯಲ್ಲಿ ಒಡಕು ಆಗಬಾರದು’ ಎಂದು ಹೇಳಿದರು.
ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ, ಚಿಕ್ಕಮುನವಳ್ಳಿಯ ಶಿವಪುತ್ರ ಸ್ವಾಮೀಜಿ, ಧಾರವಾಡದ ಅಬ್ದುಲ್ ರಜಾಕ್, ಶಿವಕುಮಾರ ಪಾರಾ, ಜ್ಯೋತಿ ಕಟಾಳೆ ಹಾಗೂ ದೀಪಾಲಿ ಬಿರಾದಾರ ಮಾತನಾಡಿದರು.
ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಡಾ.ಸುರೇಶ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಮಾತೆ ಶಾಂತಾದೇವಿ, ಮಾತೆ ಭಾಗ್ಯವಂತಿ, ಎಸ್.ದಿವಾಕರ್, ಶಶಿಕುಮಾರ ಪಾಟೀಲ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಶರಣಪ್ರಸಾದ ಹಾಗೂ ಜೈರಾಜ ಹತ್ತಿ ಉಪಸ್ಥಿತರಿದ್ದರು.
ಮಹಾರಾಷ್ಟ್ರದಲ್ಲಿ ಲಿಂಗಾಯತ ಮಹಾಮೋರ್ಚಾ ಆಯೋಜನೆ
ಸಮಾರೋಪದ ನೇತೃತ್ವ ವಹಿಸಿದ್ದ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಡಿಸೆಂಬರ್ 7ರಂದು ಮಹಾರಾಷ್ಟ್ರದ ಧಾರಾಶಿವ (ಉಸ್ಮಾನಾಬಾದ್) ಜಿಲ್ಲಾ ಕೇಂದ್ರದಲ್ಲಿ ಲಿಂಗಾಯತ ಮಹಾಮೋರ್ಚಾ ಆಯೋಜಿಸುವ ನಿರ್ಣಯ ಮಂಡಿಸಿದರು. ನವೆಂಬರ್ 14ಕ್ಕೆ ದುಬೈನಲ್ಲಿ ಚನ್ನಬಸವೇಶ್ವರ ಜಯಂತಿ ಆಚರಿಸುವುದು. ರಾಜ್ಯ ಮತ್ತು ಮಹಾರಾಷ್ಟ್ರ ಆಂಧ್ರಪ್ರದೇಶ ತಮಿಳುನಾಡು ತೆಲಂಗಾಣದಲ್ಲಿ ಧರ್ಮ ಜಾಗೃತಿ ಅಭಿಯಾನ ಕೈಗೊಳ್ಳುವುದು. 2026ರಲ್ಲಿ ಲಿಂಗಾಯತ ಧರ್ಮಕ್ಕಾಗಿ ದಿಲ್ಲಿ ಚಲೋ ಕಾರ್ಯಕ್ರಮ ರೂಪಿಸುವ ನಿರ್ಣಯಗಳನ್ನು ಸಹ ತೆಗೆದುಕೊಳ್ಳಲಾಯಿತು. ಸಭಿಕರು ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.