ಹುಲಸೂರ: ‘ಲಿಂಗಾಯತರು ಸನಾತನ ಧರ್ಮದವರಲ್ಲ, ಸನಾತನ ಧರ್ಮದ ವಿರೋಧಿಗಳೂ ಅಲ್ಲ. ನಮ್ಮ ಲಿಂಗಾಯತ ಧರ್ಮದ ತತ್ವ ಹಾಗೂ ಸಿದ್ಧಾಂತಗಳು ಸಾಂಪ್ರದಾಯಿಕವಾದ ಮೌಢ್ಯ, ಕಂದಾಚಾರ, ಧಾರ್ಮಿಕ ಶೋಷಣೆ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧವಾಗಿವೆ’ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಪ್ರತಿಪಾದಿಸಿದರು.
ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ಬಸವಕೇಂದ್ರ ತಾಲ್ಲೂಕು ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಶರಣ ಸಂಸ್ಕೃತಿ ಕುರಿತ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಲಿಂಗಾಯತರಿಗೆ ಬಸವಣ್ಣನವರು ಶ್ರೇಷ್ಠ ಧರ್ಮ ನೀಡಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಆಚರಣೆ ಮಾಡುವ ಮೂಲಕ ಬದುಕು ಸಾಗಿಸಬೇಕು. ಬಸವತತ್ವ ವೈಚಾರಿಕ ನೆಲೆಯಲ್ಲಿ ಆಚರಣೆ ಮಾಡುವ ಧರ್ಮ. ಮುಂಬರುವ ದಿನಗಳಲ್ಲಿ ಸರ್ಕಾರ ನಡೆಸುವ ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಬೇಕು. ಯಾವುದೇ ಕಾರಣಕ್ಕೂ ಒತ್ತಡ ಒಳಗಾಗಿ, ಸುಳ್ಳು ಮಾಹಿತಿಗೆ ಬಲಿಯಾಗ ಬಾರದು. ಕಡ್ಡಾಯವಾಗಿ ಲಿಂಗಾಯತ ಎಂದು ಬರೆಯಿಸಿ’ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಶರಣ ಸಂಸ್ಕೃತಿ ಕುರಿತಾದ ಶಿಬಿರದ ನೇತೃತ್ವ ವಹಿಸಿದ್ದ ಉಸ್ತೂರಿಗಿ ಗ್ರಾಮದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ‘ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಲಿಂಗಾಯತ ಸಮುದಾಯದ ಮೇಲೆ ಭಯಾನಕ ದಾಳಿ ನಡೆಯುತ್ತಿದೆ. ಸನಾತನ ಧರ್ಮ ಶ್ರೇಷ್ಠವಾಗಿದ್ದರೆ, ನಮ್ಮ ನೆಲೆಯಲ್ಲಿ ಬೌದ್ಧ, ಜೈನ, ಸಿಖ್, ಲಿಂಗಾಯತ ತತ್ವಗಳು ಪ್ರತ್ಯೇಕವಾಗಿ ಹುಟ್ಟಿಕೊಳ್ಳಲು ಕಾರಣವೇನು’ ಎಂದು ಪ್ರಶ್ನಿಸಿದರು.
‘ಸನಾತನ ಧರ್ಮದಲ್ಲಿ ಕುಂತು ತಿನ್ನುವ ವರ್ಗ ಒಂದಿದೆ. ವರ್ಣ ವ್ಯವಸ್ಥೆ, ಯಜ್ಞ–ಯಾಗ, ಗುಡಿ–ಸಂಸ್ಕೃತಿ, ಮೌಢ್ಯ ಕಂದಾಚಾರವನ್ನು ಹುಟ್ಟುಹಾಕಿ ತಮ್ಮನ್ನು ತಾವು ಶ್ರೇಷ್ಠ ಜನಾಂಗದವರು ಎಂದು ಬಿಂಬಿಸಿಕೊಂಡು, ಇತರೆ ದುಡಿಯುವ ವರ್ಗದ ಜನರ ಶೋಷಿಸುತ್ತಿತ್ತು. ಅದನ್ನು ತಪ್ಪಿಸಲು ಮಹಾವೀರ, ಬುದ್ಧ, ಬಸವಣ್ಣ ಅವರಂಥ ಮಹಾತ್ಮರು ಸನಾತನ ಸಂಸ್ಕೃತಿಗೆ ಪರ್ಯಾಯವಾಗಿ ಹೊಸ ಧರ್ಮ ಸಂಸ್ಕಾರಗಳನ್ನು ಹುಟ್ಟುಹಾಕುವ ಮೂಲಕ ಸನಾತನದಿಂದ ಆಗುತ್ತಿರುವ ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು’ ಎಂದರು.
ವೀರೇಶ ಇಲ್ಲಾಮಲೆ, ಪ್ರೇಮ ಗೌಡಗಾಂವೆ ಅವರಿಂದ ವಚನ ಗಾಯನ ನಡೆಯಿತು. ಸಚಿನ್ ಕೌಟೆ ಸ್ವಾಗತಿಸಿದರು. ರಾಜಕುಮಾರ ತೊಂಡಾರೆ ನಿರೂಪಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಬಸವರಾಜ ಮುಕ್ತಾ, ಮಹಾದೇವ ಮಹಾಜನ್, ರೇಖಾ ಕಾಡಾದಿ, ರೇವಮ್ಮ ಹುಡಗೆ , ಚಂದ್ರಶೇಖರ ಮಂಗಾ, ನಾಗರಾಜ ಕೊರೆ,ಶಂಕರ ಆದೇಪ್ಪ, ಬಿ ಸಿ ಪಾಟೀಲ, ಇಸ್ಮಾಯಿಲ್ ಪಠಾಣ, ಬಸವರಾಜ ರಗಟ್ಟೆ,ಸಡಕಯ್ಯ ಸ್ವಾಮಿ, ರಮೇಶ ತೋಟದ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
‘ಕೃಷಿ ಸಂಸ್ಕೃತಿ... ಋಷಿ ಸಂಸ್ಕೃತಿ...’
‘ಸನಾತನ ಧರ್ಮೀಯರು ಕೃಷಿ ಸಂಸ್ಕೃತಿಯ ವಿರುದ್ಧ ಋಷಿ ಸಂಸ್ಕೃತಿ ಹುಟ್ಟಿ ಹಾಕಿ ದುಡಿಯುವ ಸಂಸ್ಕೃತಿ ನಾಶ ಮಾಡಿದ ಮಧ್ಯ ಏಷ್ಯನ್ ಯೂರೋಪಿಯನ್ ಜನಾಂಗದವರು. ನಮ್ಮ ಮೂಲ ದ್ರಾವಿಡ ಸಂಸ್ಕೃತಿ ವಿನಾಶಕ್ಕೆ ಕಾರಣಿಭೂತರು. ಇವರು ವಿದೇಶದಿಂದ ಬಂದ ಸಾಂಸ್ಕೃತಿಕ ಭಯೋತ್ಪಾದಕರು. ಇವರು ಲಿಂಗಾಯತರ ಮನೆಗೆ ನುಗ್ಗಿ ಧಾರ್ಮಿಕ ಮೂಢನಂಬಿಕೆ ಕಂದಾಚಾರದಂಥ ವಿಚಾರ ತುಂಬಿ ಭಯ ಹುಟ್ಟಿಸಿ ಅವರದ್ದೇ ಆಚರಣೆಯ ಆಚರಿಸುವಂತೆ ಹಾಗೂ ನಮನ್ನು ಗುಲಾಮರನ್ನಾಗಿ ಮಾಡುವ ಯತ್ನ ನಡೆಯುತ್ತಿದೆ’ ಎಂದು ಕೋರಣೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
'ಸ್ವಂತಿಕೆ ಅರಿವು ಹೊಂದಿ’
ಶರಣ ಚಿಂತಕ ಶಿವಕುಮಾರ ಶೇಟಕಾರ ಮಾತನಾಡಿ ‘ಲಿಂಗಾಯತ ಧರ್ಮದ ಸಂಸ್ಕಾರಗಳು ಸರಿಯಾದ ರೀತಿಯಲ್ಲಿ ಅರಿಯದ ಕಾರಣ ಲಿಂಗಾಯತ ಸಮುದಾಯದವರು ಮೌಢ್ಯದ ಆಚರಣೆ ಕಡೆ ಒಲವು ತೊರುತ್ತಿದ್ದಾರೆ. ಲಿಂಗಾಯತ ತತ್ವಗಳು ಆಚರಣೆ ಸಿದ್ಧಾಂತಗಳನ್ನು ವಿರೋಧಿಸಲು ಲಿಂಗಾಯತ ಸಮುದಾಯದವರನ್ನೆ ಬಳಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಲಿಂಗಾಯತ ಧರ್ಮೀಯರು ಜಾಗೃತರಾಗಬೇಕು. ನಮ್ಮ ಸ್ವಂತಿಕೆಯ ಅರಿವು ಹೊಂದಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.