ಹುಲಸೂರ: ‘ದೇವರನ್ನು ಗುಡಿ, ಬೆಟ್ಟ–ಗುಡ್ಡ, ನದಿಗಳಲ್ಲಿ ಹುಡುಕಿಕೊಂಡು ಪಾದಯಾತ್ರೆಯ ಮಾಡವ ದೇಗುಲ ಸಂಸ್ಕೃತಿಯನ್ನು ಲಿಂಗಾಯತರು ಬಿಡಬೇಕು. ಇಷ್ಟಲಿಂಗ ಧಾರಣೆ ಮಾಡಿಕೊಂಡು ದೇಹವೇ ದೇವಾಲಯವೆಂದು ಭಾವಿಸಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿಚಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವಕುಮಾರ ಶಿವಯೋಗಿಗಳ 49ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶುಕ್ರವಾರ ವೇದಿಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇವಾಲಯಗಳಲ್ಲಿ ಇಂದು ಕಾಲ್ತುಳಿತ, ಹಣದ ಅವ್ಯವಹಾರದಂತ ದುರಂತಗಳು ಸಂಭವಿಸಿದಾಗ ದೇವರು ರಕ್ಷಣೆಗೆ ಬಾರದೆ ಇರುವುದನ್ನು ಕಂಡರೆ ದೇವರು ನಾಲ್ಕು ಗೊಡೆಗಳ ಮದ್ಯ ಇಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ದೇವರು ಸರ್ವವ್ಯಾಪಿ, ದೇವಾಲಯದಲ್ಲಿ ಕೊಡುವ ಪ್ರಸಾದ–ತೀರ್ಥಕ್ಕಿಂತ ಮನೆಯಲ್ಲಿನ ಶುದ್ಧ ನೀರು, ತಾಯಿ ಮಾಡುವ ಅನ್ನ ಮಹಾಪ್ರಸಾದ ಎಂದು ತಿಳಿದುಕೊಳ್ಳಬೇಕು. ಲಿಂಗಾಯತರು ಶರಣರ ವಚನಗಳ, ಅವರ ಸಿದ್ಧಾಂತಗಳ ವಿರುದ್ಧವಾಗಿ ಮನೆಯಲ್ಲಿ ಹೋಮ–ಹವನ, ಯಜ್ಞ–ಯಾಗ ಮಾಡುವ ಮೂಲಕ ಲಿಂಗಾಯತ ಸಂಸ್ಕೃತಿಯನ್ನು ನಾಶಮಾಡುತ್ತಿರುವುದು ದುರಂತ’ ಎಂದು ವಿಷಾಧ ವ್ಯಕ್ತಪಡಿಸಿದರು.
‘ಪ್ರತಿ ವಸ್ತುವೂ ಕಲುಷಿತಗೊಂಡು ದೇಹ ಸೇರಿ ಅನಾರೋಗ್ಯ ಕಾಡುವ ಸ್ಥಿತಿ ನಿರ್ಮಾಣವಾಗಿದೆ. ರಸಾಯನಿಕ ಗೊಬ್ಬರ, ಔಷಧಿ ಸಿಂಪರಣೆ ಮಾಡುವುದರಿಂದ ನಾವು ತಿನ್ನುವ ಆಹಾರ ಪದಾರ್ಥಗಳು ವಿಷಯುಕ್ತವಾಗಿದೆ. ನೈಸರ್ಗಿಕ ಕೃಷಿ ಅಗತ್ಯ ಇದೆ. ಧರ್ಮ ಇಂದು ಹಣದ ಹಿಂದೆ ಬಿದ್ದು ಕಲುಷಿತಗೊಂಡು ಬಂಡವಾಳ ಇಲ್ಲದೆ ರಾಜಕಾರಣ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಜಾಪುರದ ಸಾಹಿತಿ ಜೆ.ಎಸ್.ಪಾಟೀಲ, ‘12ನೇ ಶತಮಾನದಲ್ಲಿ ಶರಣರು ಏಕದೇವೋಪಾಸನೆಯಲ್ಲಿ ಇದ್ದರು. ಆದರೆ ಬರಬರುತ್ತಾ ಲಿಂಗಾಯತರು ಬಹುದೇವತಾ ಆರಾಧನೆ ಮಾಡುವ ಮೂಲಕ ಮಂದಿರ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ, ಇದು ಸರಿಯಾದ ಮಾರ್ಗ ಅಲ್ಲ. ದೇವಾಲಯಗಳು ಸುಲಿಗೆಯ ಕೇಂದ್ರವಾಗಿರುವುದನ್ನು ಅರಿತ ಶರಣರು ಲಿಂಗವನ್ನು ನಮ್ಮ ಅಂಗೈಯಲ್ಲಿ ಇಡುವ ಮೂಲಕ ವೈಧಿಕರಿಂದ ನಡೆಯುವ ಶೋಷಣೆಯಿಂದ ರಕ್ಷಣೆ ಮಾರ್ಗ ತಿಳಿಸಿಕೊಟ್ಟರು. ಲಿಂಗಾಯತರ ಶಿಕ್ಷಣ ಸಂಸ್ಥೆ, ಮಠಗಳು, ಪ್ರಸಾದ ನಿಲಯಗಳು, ವಚನಗಳನ್ನು ನಾಶಮಾಡುವ ಮೂಲಕ ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಹೂನ್ನಾರ ನಡೆಯುತ್ತಿದೆ, ಇದನ್ನು ಅರಿತು ಎಚ್ಚರ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.
ಹುಲಸೂರ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರು ಬಸವ ಪಟ್ಟದೇವರು ಮಾತನಾಡಿದರು.
ಅಭಿನವ ಚೆನ್ನಬಸವ ಸ್ವಾಮೀಜಿ, ಸಾಯಗಾಂವ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಜನವಾಡ ಅಲ್ಲಮಪ್ರಭು ಮಠ ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರೊ.ಶಿವಕುಮಾರ ಉಪ್ಪೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಲತಾ ಹಾರಕುಡೆ, ದೀಪಕ ಠಮಕೆ, ಮಂಜು ರಬಕವಿ, ಶೇಖರ ಇಮ್ಮಡಿ ಉಪಸ್ಥಿತರಿದ್ದರು.
ರಾತ್ರಿ 10 ಗಂಟೆಗೆ ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯ ಬೀದರ್ ಮಕ್ಕಳಿಂದ ಮಹಾ ಕ್ರಾಂತಿ ರೂಪಕ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.