ADVERTISEMENT

ಹುಲಸೂರ | ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿ ಹಾವಳಿ; ಜನ, ಪ್ರಾಣಿಗಳಿಗೆ ಕಂಟಕ

ಕ್ರಮಕ್ಕೆ ಪರಿಸರ ಪ್ರಿಯರ ಆಗ್ರಹ

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2024, 5:35 IST
Last Updated 28 ಸೆಪ್ಟೆಂಬರ್ 2024, 5:35 IST
ಹುಲಸೂರ ಹೊರವಲಯದ ಬೀದರ್ - ಲಾತೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳ ರಾಶಿ
ಹುಲಸೂರ ಹೊರವಲಯದ ಬೀದರ್ - ಲಾತೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳ ರಾಶಿ   

ಹುಲಸೂರ: ಪಟ್ಟಣ ಸೇರಿ ಗ್ರಾಮೀಣ ಭಾಗದ ಹೊರ ವಲಯದಲ್ಲಿನ ಖಾಲಿ ನಿವೇಶನಗಳು, ರಸ್ತೆ ಬದಿಯಲ್ಲಿ ಇಳಿ ಹೊತ್ತಿನಲ್ಲಿ ಮದ್ಯಪ್ರಿಯರು ಮದ್ಯಪಾನ ಮಾಡಿ ನಂತರ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಒಡೆಯುತ್ತಿದ್ದು, ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖ ಗ್ರಾಮಗಳಾದ ಬೇಲೂರ, ಗಡಿಗೌಡಗಾಂವ, ಹುಲಸೂರ, ತೊಗಲುರ, ಮೀರಖಲ, ಮುಚಳಂಬ ಹಾಗೂ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯ ಮೆಹಕರ, ಅಳವಾಯಿ, ಅಟ್ಟರಗಾ, ಹಲಸಿ ತುಗಾಂವ, ಸಾಯಗಾಂವ, ವಾಂಝರಖೇಡ ಗ್ರಾಮ ಪಂಚಾಯಿತಿ ಸೇರಿ ಅವುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಬಾಟಲಿಗಳ ಗಾಜು ಬಿದ್ದಿವೆ. ತಾಲ್ಲೂಕಿನ ಬಹುತೇಕ ಗ್ರಾಮಗಳ ಹೊರವಲಯದ ಶಾಲೆ, ಕಾಲೇಜು ಆವರಣ ಸರ್ಕಾರಿ ಕಚೇರಿ, ಮಿನಿ ಸೇತುವೆಯ ಕೆಳ ಭಾಗ, ನದಿ, ಕೆರೆ-ಕಟ್ಟೆ, ಅರಣ್ಯ ಪ್ರದೇಶ, ಶ್ರದ್ಧಾ ಕೇಂದ್ರಗಳಲ್ಲಿ ಬಿಸಾಡಿರುವ ಒಡೆದ ಗಾಜುಗಳು ಮಳೆ ಸಂದರ್ಭದಲ್ಲಿ ನದಿ, ಕೆರೆ, ಕಟ್ಟೆಗಳ ಒಡಲನ್ನು  ಸೇರುವುದರಿಂದ ಪ್ರಾಣಿ, ಪಕ್ಷಿಗಳ ಪ್ರಾಣಕ್ಕೂ ಕಂಟಕವಾಗಿದೆ.

ಪಟ್ಟಣದ ಹೊರ ಪ್ರದೇಶಗಳ ಜಮೀನುಗಳಲ್ಲಿ, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ತೆರಳಿ ಮದ್ಯಪಾನ ಮಾಡಿ ರಸ್ತೆ ಮೇಲೆ ಬಾಟಲ್‌ ಒಡೆದು ಹಾಕುತ್ತಿದ್ದು, ಇದರಿಂದ ಸಣ್ಣ ಮತ್ತು ದೊಡ್ದ ವಾಹನಗಳು ಪಂಚರ್ ಆಗಿ ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ADVERTISEMENT

ಪಟ್ಟಣದ ಕೆಲವು ಮಾಂಸಾಹಾರಿ, ಹೋಟೆಲ್‌, ಡಾಬಾಗಳಲ್ಲಿ ಕದ್ದುಮುಚ್ಚಿ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಲಾಗುತ್ತಿದ್ದು, ಬಾರ್‌ಗಳಲ್ಲಿ ಮಾತ್ರ ಸರಬರಾಜಾಗುವಂತೆ ಅಬಕಾರಿ ಇಲಾಖೆ ನೀತಿ ರೂಪಿಸಿ, ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಕಡಿವಾಣ ಹಾಕಬೇಕು. ಪೊಲೀಸ್‌ ಅಧಿಕಾರಿಗಳು ಗಸ್ತು ತಿರುಗಿ, ಈ ಕುರಿತು ನಿಗಾ ಇಡಬೇಕು ಎಂದು ಪರಿಸರಪ್ರಿಯರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಬಿಟ್ಟು ಹೋಗುತ್ತಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ತಪ್ಪಿತಸ್ಥರಿಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
-ಸಾದಿಕ್ ಬಾಷಾ, ಅಬಕಾರಿ ಉಪ ನಿರೀಕ್ಷಕ ಹುಲಸೂರ ಮತ್ತು ಬಸವಕಲ್ಯಾಣ ತಾಲ್ಲೂಕು
ತಾಲ್ಲೂಕಿನಾದ್ಯಂತ ಮದ್ಯದ ಬಾಟಲಿಗಳ ಹಾವಳಿ ಅತಿಯಾಗಿದೆ. ಇದನ್ನು ತಡೆಯಲು ಇದಕ್ಕೆ ಪ್ರಜ್ಞಾವಂತ ನಾಗರಿಕರೆಲ್ಲರೂ ಕೈ ಜೋಡಿಸಬೇಕು
-ಬಾಲಾಜಿ ಅದೆಪ್ಪಾ, ಸಹಾಯಕ ಸರ್ಕಾರಿ ವಕೀಲ ಹುಲಸೂರ ಮತ್ತು ಬಸವಕಲ್ಯಾಣ ಕೋರ್ಟ್‌
ಉಪಯೋಗಿಸಿದ ಮದ್ಯದ ಬಾಟಲಿಗಳನ್ನು ಈಗ ಕೆ.ಜಿ.ಗೆ ₹ 5ಕ್ಕೆ ಖರೀದಿಸುತ್ತೇವೆ. ಈ ಕಾರಣಕ್ಕೆ ಆಯುವವರೂ ಭಾರವಾಗುತ್ತದೆ ಎಂದು ಮದ್ಯದ ಬಾಟಲಿ ಬಿಟ್ಟು ಪ್ಲಾಸ್ಟಿಕ್ ಬಾಟಲಿ ಆಯುತ್ತಿದ್ದಾರೆ
-ರಾಜಾರಾಮ್ ಇಸ್ಮಾಯಿಲ್, ಗುಜರಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.