ADVERTISEMENT

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹857 ಕೋಟಿ ಸಾಲ

ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:58 IST
Last Updated 20 ನವೆಂಬರ್ 2020, 2:58 IST
ಬೀದರ್‌ನಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಪ್ರಯುಕ್ತ ನಡೆದ ‘ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿ ಗಾಗಿ ಸಹಕಾರ ಸಂಸ್ಥೆಗಳು’ ದಿನದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿದರು
ಬೀದರ್‌ನಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಪ್ರಯುಕ್ತ ನಡೆದ ‘ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿ ಗಾಗಿ ಸಹಕಾರ ಸಂಸ್ಥೆಗಳು’ ದಿನದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿದರು   

ಬೀದರ್: ಪ್ರಸಕ್ತ ವರ್ಷ ಡಿಸಿಸಿ ಬ್ಯಾಂಕ್ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹857 ಕೋಟಿ ಸಾಲ ಒದಗಿಸುವ ಗುರಿ ಹೊಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

67ನೇ ಅಖಿಲ ಭಾರತ ಸಹಕಾರ ಸಪ್ತಾಹ ಪ್ರಯುಕ್ತ ಇಲ್ಲಿಯ ಡಿಸಿಸಿ ಬ್ಯಾಂಕ್‍ನಲ್ಲಿ ಗುರುವಾರ ನಡೆದ ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂಕಟದ ಸಂದರ್ಭದಲ್ಲಿ ಬ್ಯಾಂಕ್ ರೈತರು, ಮಹಿಳೆಯರು ಹಾಗೂ ಯುವಕರಿಗೆ ₹1,038 ಕೋಟಿಯ ಬೃಹತ್ ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಿದರು.

ADVERTISEMENT

ರೈತರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶ ಬ್ಯಾಂಕಿಗೆ ಇಲ್ಲ. ಅವರ ಆರ್ಥಿಕ ಮಟ್ಟವನ್ನು ಬಲಪಡಿಸುವುದೇ ಸಾಲ ನೀಡಿಕೆಯ ಮೂಲ ಉದ್ದೇಶ ಆಗಿದೆ ಎಂದು ಹೇಳಿದರು.

ಬ್ಯಾಂಕ್ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಜನರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ಬ್ಯಾಂಕ್ ಧ್ಯೇಯವಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ಅಧ್ಯಕ್ಷರಾಗಿದ್ದ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಆತ್ಮನಿರ್ಭರ್ ಭಾರತ ಕಲ್ಪನೆಯೊಂದಿಗೆ ಎರಡು ತರಬೇತಿ ಕೇಂದ್ರಗಳನ್ನು ಆರಂಭಿಸಿ, ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ವಿವಿಧ ತರಬೇತಿಗಳನ್ನು ಕೊಡಿಸಿದರು. ಈವರೆಗೆ ತರಬೇತಿ ಪಡೆದ 15 ಸಾವಿರ ಯುವಕ, ಯುವತಿಯರಲ್ಲಿ ಶೇ 75 ರಷ್ಟು ಮಂದಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ. ಸ್ವಸಹಾಯ ಗುಂಪುಗಳು ದೊಡ್ಡ ಮಟ್ಟದ ಆರ್ಥಿಕ ಬದಲಾವಣೆ ತಂದಿದೆ ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉಮಾಕಾಂತ ನಾಗಮಾರಪಳ್ಳಿ, ಪತ್ರಕರ್ತರಾದ ಗುರುರಾಜ ಕುಲಕರ್ಣಿ ಹಾಗೂ ಶಶಿಕಾಂತ ಬಂಬುಳಗೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪರಮೇಶ್ವರ ಮುಗಟೆ ಅಧ್ಯಕ್ಷತೆ ವಹಿಸಿದ್ದರು. ಮಾಂಜರಾ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬೀದರ್ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಸಲಿಮೊದ್ದೀನ್, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಎ.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಚಪ್ಪ ಪಾಟೀಲ, ಸಹಕಾರ ಸಂಘಗಳ ಪ್ರಭಾರ ಉಪ ನಿಬಂಧಕ ಸೈಯದ್ ಖುದ್ದೂಸ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಮಹಾದೇವ ಸ್ವಾಮಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಹೈಬತ್ತಿ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.