
ಬೀದರ್: ‘ಈ ಸಲದ ಲೋಕ್ ಅದಾಲತ್‌ನಲ್ಲಿ 26,464 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹28.37 ಕೋಟಿ ವಸೂಲಿ ಮಾಡಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕೆ. ಕನಕಟ್ಟೆ ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ನಡೆದ ಲೋಕ್ ಅದಾಲತ್‌ಗಿಂತಲೂ ಡಿ.9ರಂದು ಹಮ್ಮಿಕೊಂಡಿದ್ದ ಅದಾಲತ್‌ನಲ್ಲಿ ಹೆಚ್ಚಿನ ಜನ ಭಾಗವಹಿಸಿದ್ದರು. ಹಿಂದಿಗಿಂತ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘11,648 ಪೆಂಡಿಂಗ್ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹14.86 ಕೋಟಿ ಮೊತ್ತದ ಪರಿಹಾರ ಒದಗಿಸಿ ಇತ್ಯರ್ಥಪಡಿಸಲಾಗಿದೆ. 14,816 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿ ₹13.50 ಕೋಟಿ ಪರಿಹಾರ ನೀಡಲಾಗಿದೆ. 163 ಬ್ಯಾಂಕ್ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹1.23 ಕೋಟಿ ಬಾಕಿ ವಸೂಲಾತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳ ನೀರಿನ ತೆರಿಗೆ ಮತ್ತು ಬಿಎಸ್‌ಎನ್‌ಎಲ್, ಜೆಸ್ಕಾಂ ಬಿಲ್, ಟ್ರಾಫಿಕ್ ಚಲನ್ ವಸೂಲಾತಿಯ 14,653 ಪ್ರಕರಣಗಳನ್ನು ಬಗೆಹರಿಸಿ ₹12.27 ಕೋಟಿ ವಸೂಲಾತಿ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳು ಸೇರಿದಂತೆ ಒಟ್ಟು 26,464 ಪ್ರಕರಣಗಳನ್ನು ಈ ಸಲದ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಂಬತ್ತು ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ’ ಎಂದು ವಿವರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ್, ರಾಹುಲ್, ಜೀವನ, ಯೋಹನ, ಜಿಲ್ಲಾ ವಾರ್ತಾ ಅಧಿಕಾರಿ ಜಿ.ಸುರೇಶ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.