ADVERTISEMENT

ಬೀದರ್: ಬಿಜೆಪಿ ಶಾಸಕರ ವಿರೋಧ ಲೆಕ್ಕಿಸದೇ ಭಗವಂತ ಖೂಬಾಗೆ ಟಿಕೆಟ್‌

ಖೂಬಾ ಮೇಲುಗೈ; ಬಿಜೆಪಿ ಶಾಸಕರಿಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 14:58 IST
Last Updated 13 ಮಾರ್ಚ್ 2024, 14:58 IST
<div class="paragraphs"><p>ಭಗವಂತ ಖೂಬಾ</p></div>

ಭಗವಂತ ಖೂಬಾ

   

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಬಿಜೆಪಿ ವರಿಷ್ಠರು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಮೇಲೆ ಭರವಸೆ ಇಟ್ಟು ಮತ್ತೊಮ್ಮೆ ಅವರಿಗೆ ಟಿಕೆಟ್‌ ಘೋಷಿಸಿದ್ದಾರೆ. ಬುಧವಾರ ಸಂಜೆ ಖೂಬಾ ಅವರ ಹೆಸರು ಅಧಿಕೃತವಾಗಿ ಘೋಷಿಸಲಾಗಿದೆ.

ADVERTISEMENT

ಭಗವಂತ ಖೂಬಾ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ಕೊಡಬಾರದು ಎಂದು ಸ್ವಪಕ್ಷೀಯ ಶಾಸಕರಾದ ಪ್ರಭು ಚವಾಣ್‌, ಶರಣು ಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ ಪಟ್ಟು ಹಿಡಿದಿದ್ದರು. ಪ್ರಭು ಚವಾಣ್‌ ಅವರು ಪಕ್ಷದ ಸಮಾರಂಭದಲ್ಲೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು.

ಪಕ್ಷದ ಎಲ್ಲಾ ಹಂತದ ನಾಯಕರನ್ನು ಭೇಟಿ ಮಾಡಿ, ಖೂಬಾ ಅವರನ್ನು ಮತ್ತೆ ಕಣಕ್ಕಿಳಿಸಬಾರದು ಎಂದು ಹಕ್ಕೊತ್ತಾಯ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಹಾಲಿ ಹಾಗೂ ಮಾಜಿ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇದರೊಂದಿಗೆ ಭಗವಂತ ಖೂಬಾ ಅವರು ಮೇಲುಗೈ ಸಾಧಿಸಿದ್ದಾರೆ.

ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಬಿಜೆಪಿ ವೀಕ್ಷಕರೆದುರು ಟಿಕೆಟ್‌ ಆಕಾಂಕ್ಷಿಗಳು, ಬಿಜೆಪಿ ಶಾಸಕರು ಖೂಬಾ ಅವರಿಗೆ ಟಿಕೆಟ್‌ ಕೊಡದಂತೆ ಒತ್ತಾಯಿಸಿದ್ದರು. ಅದು ಕೂಡ ಫಲ ಕೊಟ್ಟಿಲ್ಲ.

––––

‘ಪ್ರಾಮಾಣಿಕ ಸೇವೆಗೆ ಸಂದ ಟಿಕೆಟ್‌’

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ನಾನು ಮಾಡಿರುವ ಪ್ರಾಮಾಣಿಕ ಸೇವೆ, ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪಕ್ಷ ನನಗೆ ಮೂರನೇ ಸಲ ಚುನಾವಣೆಗೆ ಟಿಕೆಟ್‌ ನೀಡಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರದಲ್ಲಿ ಜನರ ಬೆಂಬಲ, ಜಾತಿ, ಮತ, ಪಂಥಗಳನ್ನು ಪರಿಗಣಿಸದೇ ಎಲ್ಲರೊಂದಿಗೆ ನಾನು ಹೊಂದಿರುವ ವಿಶ್ವಾಸ, ಅಭಿವೃದ್ಧಿ ಕಾರ್ಯಗಳು, ಕೇಂದ್ರದ ಯೋಜನೆಗಳ ಅನುಷ್ಠಾನ ಪರಿಗಣಿಸಿ ಪಕ್ಷದ ವರಿಷ್ಠರು ಟಿಕೆಟ್‌ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

ಕ್ಷೇತ್ರದ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿ, ಕ್ಷೇತ್ರದಲ್ಲಿ ಪಕ್ಷ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗುವ ಭರವಸೆ ನನಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಬೆಂಬಲಿಗರು ಬೀದರ್‌ನ ಬಸವೇಶ್ವರ ವೃತ್ತದಲ್ಲಿ ಸೇರಿ ಸಂಭ್ರಮಾಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.