ADVERTISEMENT

ಹುಮನಾಬಾದ್‌: ತಿಳಿಯಾಗದ ಚರ್ಮಗಂಟು ರೋಗ

ಹುಮನಾಬಾದ್‌, ಚಿಟಗುಪ್ಪ ತಾಲ್ಲೂಕಿನ ಜಾನುವಾರುಗಳಲ್ಲಿ ಪ್ರಕರಣ ಮತ್ತೆ ಬೆಳಕಿಗೆ

ಪ್ರಜಾವಾಣಿ ವಿಶೇಷ
Published 20 ಮೇ 2023, 23:34 IST
Last Updated 20 ಮೇ 2023, 23:34 IST
ಹುಮನಾಬಾದ್ ಸಮೀಪದ ಚಿಟಗುಪ್ಪ ತಾಲ್ಲೂಕಿನ ನಿರ್ಣಾವಾಡಿಯಲ್ಲಿ ಚರ್ಮಗಂಟು ರೋಗದಿಂದ ಬಳಲುತ್ತಿರುವ ಎತ್ತು
ಹುಮನಾಬಾದ್ ಸಮೀಪದ ಚಿಟಗುಪ್ಪ ತಾಲ್ಲೂಕಿನ ನಿರ್ಣಾವಾಡಿಯಲ್ಲಿ ಚರ್ಮಗಂಟು ರೋಗದಿಂದ ಬಳಲುತ್ತಿರುವ ಎತ್ತು   

ಗುಂಡು ಅತಿವಾಳ

ಹುಮನಾಬಾದ್‌: ಜಾನುವಾರುಗಳಿಗೆ ಮಾರಕವಾಗಿ ಕಾಡುತ್ತಿರುವ ಚರ್ಮಗಂಟು ರೋಗವು ಇನ್ನೂ ತಿಳಿಯಾಗಿಲ್ಲ. ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನ ಕೆಲ ಗ್ರಾಮಗಳ ಜಾನುವಾರುಗಳಲ್ಲಿ ರೋಗ ಮತ್ತೆ ಕಂಡು ಬಂದಿದೆ.

ಕಳೆದ ‌ಒಂದು ವಾರದಿಂದ ಅನೇಕ ಜಾನುವಾರುಗಳು ರೋಗಪೀಡಿತವಾಗಿವೆ. ಚಿಟಗುಪ್ಪ ತಾಲ್ಲೂಕಿನ ನಿರ್ಣಾ , ಬೇಮಳಖೇಡ್, ಹುಮನಾಬಾದ್ ತಾಲ್ಲೂಕಿನ ಹಳಿಖೇಡ್ ಬಿ.‌ದುಬಲಗುಂಡಿ,‌ ಘಾಟಬೋರಾಳ್ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಈ ಸೋಂಕು ಹೆಚ್ಚಾಗಿ ದನ, ಕರು, ಎತ್ತು, ಎಮ್ಮೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಇದರಿಂದ ರೈತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ಚರ್ಮ ಗಂಟು ರೋಗಕ್ಕೆ ತುತ್ತಾಗುವ ಜಾನುವಾರುಗಳಲ್ಲಿ ವಾರಗಟ್ಟಲೆ ಜ್ವರ ಇರುವುದರೊಂದಿಗೆ ಹಾಲು ನೀಡುವ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.  ನಾನು ಪ್ರತಿ ದಿನ ಒಟ್ಟು 10 ಲೀಟರ್ ಹಾಲು ಮಾರಾಟ ಮಾಡುತ್ತಿದ್ದೆ. ಆದರೆ ಈ ಚರ್ಮಗಂಟು ರೋಗದ ಲಕ್ಷಣ ಹಸುವಿಗೆ ಬಂದ ಕಾರಣ ಹಾಲು ನೀಡುವುದರಲ್ಲಿ ಕಡಿಮೆ ಮಾಡಿದೆ ಎಂದು ರೈತ ಶಿವಾನಂದ ತಿಳಿಸಿದರು.

ತಾಲ್ಲೂಕಿನಾದ್ಯಂತ ಕಳೆದ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿಯೊ ಈ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಮತ್ತೆ ಈಗ ಕಳೆದ ಒಂದು ವಾರದಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಲಸಿಕೆ ನೀಡುವುದನ್ನು ಆರಂಭಿಸಲಾಗಿದೆ. ರೈತರು ಆತಂಕ ಪಡಬಾರದು. ಜಾನುವಾರು ಕೊಟ್ಟಿಗೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಸೊಳ್ಳೆಗಳಿಂದ ರಕ್ಷಣೆ ಮಾಡುವುದಕ್ಕಾಗಿ ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಬೇವಿನ ಎಲೆಯಿಂದ ಹೊಗೆ ಹಾಕಬೇಕು ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್ ಸಲಹೆ ನೀಡಿದರು.

ಹುಮನಾಬಾದ್ ತಾಲ್ಲೂಕಿನಲ್ಲಿ ಒಟ್ಟು 25 ಸಾವಿರ ಜಾನುವಾರುಗಳಿದ್ದು, ಅದರಲ್ಲಿ ಡಿಸೆಂಬರ್ ತಿಂಗಳಲ್ಲಿ 10,786  ಮತ್ತು ಜನವರಿಯಲ್ಲಿ 12,469 ಜಾನುವಾರು ಸೇರಿ ಒಟ್ಟು 23,265 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 8 ಜಾನುವಾರು ಈ ಸೋಂಕಿನಿಂದ ಮೃತಪಟ್ಟಿದ್ದು, ಮೃತಪಟ್ಟ ಎಲ್ಲಾ ಜಾನುವಾರುಗಳಿಗೆ ₹ 5 ಸಾವಿರದಿಂದ ₹ 20 ಸಾವಿರದವರೆಗೆ ಪರಿಹಾರ ನೀಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್ ಮಾಹಿತಿ ತಿಳಿಸಿದರು.

ಚರ್ಮಗಂಟು ರೋಗಕ್ಕೆ ತುತ್ತಾದ ಹಸು
ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಈ ರೋಗಕ್ಕೆ ಈಗಾಗಲೇ ಲಸಿಕೆ ನೀಡುವುದನ್ನು ಆರಂಭಿಸಲಾಗಿದೆ. ರೈತರು ಆತಂಕ ಪಡಬಾರದು.
–ಡಾ.ಗೋವಿಂದ್ ಸಹಾಯಕ ನಿರ್ದೇಶಕ ಪಶು ಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.