ADVERTISEMENT

ಬೀದರ್‌: ಪಾಪನಾಶನ ದರ್ಶನಕ್ಕೆ ಸಕಲ ಸಿದ್ಧತೆ- ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ

ಚಂದ್ರಕಾಂತ ಮಸಾನಿ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
ಬೀದರ್‌ನ ಪಾಪನಾಶ ಮಂದಿರದ ಆವರಣದಲ್ಲಿ ವಿಭೂತಿ, ಅರಿಷಿಣ, ಕುಂಕುಮ ಮಾರಾಟಕ್ಕೆ ಇಡಲಾಗಿದೆ
ಬೀದರ್‌ನ ಪಾಪನಾಶ ಮಂದಿರದ ಆವರಣದಲ್ಲಿ ವಿಭೂತಿ, ಅರಿಷಿಣ, ಕುಂಕುಮ ಮಾರಾಟಕ್ಕೆ ಇಡಲಾಗಿದೆ   

ಬೀದರ್‌: ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯ ಎಲ್ಲ ಶಿವ ದೇಗುಲಗಳಲ್ಲಿ ಶಿವನ ಆರಾಧನೆ ಶುರುವಾಗಿದೆ. ನಗರದ ಕಣಿವೆ ಪ್ರದೇಶದಲ್ಲಿರುವ ಪುರಾತನ ಪಾಪನಾಶ ಮಂದಿರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಖರ ಬಿಸಿಲು ಇರುವ ಕಾರಣ ಮಂದಿರದ ಆವರಣದಲ್ಲಿ ಬೃಹತ್‌ ಪೆಂಡಾಲ್ ಹಾಕಲಾಗಿದೆ. ಭಕ್ತರ ದಟ್ಟಣೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾಡಲಾಗಿದೆ. ದೇಗುಲವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ಪೆಂಡಾಲ್‌ ಹಾಕಲಾಗಿದೆ. ಮಂದಿರದ ಪರಿಸರ ಸ್ವಚ್ಛಗೊಳಿಸಲಾಗಿದೆ. ನಗರಸಭೆ ಸಿಬ್ಬಂದಿ ಪಾಪನಾಶ ಮಂದಿರ ಮಾರ್ಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ರಸ್ತೆ ಬದಿಗೆ ಕ್ರಿಮಿನಾಶಕ ಸಿಂಪರಣೆ ಮಾಡಿದ್ದಾರೆ.

ADVERTISEMENT

ದೇವಸ್ಥಾನದ ಮುಂಭಾಗದಲ್ಲಿರುವ ರಾಮತೀರ್ಥ ಪುಷ್ಕರಣಿಯನ್ನು ಶುಚಿಗೊಳಿಸಿ ಸ್ವಚ್ಛವಾದ ನೀರು ಸಂಗ್ರಹಿಸಲಾಗಿದೆ. ಬುಧವಾರ ಸಂಜೆಯಿಂದಲೇ ಭಕ್ತರು ಶಿವನ ದರ್ಶನಕ್ಕೆ ಬರುತ್ತಿದ್ದಾರೆ. ಗುರುವಾರ ಬೆಳಗಿನ ಜಾವ ಜಲಾಭಿಷೇಕ, ಕ್ಷೀರಾಭಿಷೇಕ, ಹಣ್ಣಿನ ಅಭಿಷೇಕ. ರುದ್ರಾಭಿಷೇಕ ನಡೆಯಲಿದೆ. ಭಕ್ತರು ಉದ್ಭವ ಲಿಂಗಕ್ಕೆ ಬಿಲ್ವಪತ್ರೆ, ಕಾಯಿ, ಕರ್ಪೂರ, ಹೂವು ಅರ್ಪಿಸಲಿದ್ದಾರೆ.

ನಗರದ ಕೆಲ ಉದ್ಯಮಿಗಳು ಭಕ್ತರಿಗಾಗಿ ಉಚಿತ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ ವರೆಗೂ ಪ್ರಸಾದ ವಿತರಣೆ ಮಾಡಲಿದ್ದಾರೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಇಲಾಖೆ ಮಳಿಗೆ:ಕೋವಿಡ್‌ ಕಾರಣ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಆರೋಗ್ಯ ಇಲಾಖೆ ಒಂದು ಮಳಿಗೆಯನ್ನು ತೆರೆದಿದೆ. ವೈದ್ಯಕೀಯ ಸಿಬ್ಬಂದಿ ಭಕ್ತರ ಮೇಲೆ ನಿಗಾ ಇಟ್ಟಿದ್ದಾರೆ. ಜನ ಜಂಗುಳಿ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಂದಿರದ ಮಾರ್ಗದಲ್ಲಿ ಎರಡೂ ಬದಿಯಲ್ಲಿ ಆಟಿಕೆ, ಪೂಜಾ ಸಾಮಗ್ರಿಗಳ ಮಳಿಗೆಗಳು ತೆರೆದುಕೊಂಡಿವೆ. ಕುಂಕುಮ, ಅರಿಷಿಣ, ಅಷ್ಟಗಂಧ, ಗುಲಾಲು, ವಿಭೂತಿ, ರುದ್ರಾಕ್ಷಿ ಮಾಲೆಗಳು, ಕ್ಯಾಲೆಂಡರ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಪಿಒಪಿ ಹಾಗೂ ಮಣ್ಣಿನ ಬೊಂಬೆಗಳನ್ನು ಅಪಾರ ಪ್ರಮಾಣದಲ್ಲಿ ಮಾರಾಟಕ್ಕೆ ತರಲಾಗಿದೆ.

***
ಪುರಾತನ ದೇಗುಲ

ಬೀದರ್‌: ನಗರದ ಕಣಿವೆ ಪ್ರದೇಶದಲ್ಲಿರುವ ಪಾಪನಾಶ ಮಂದಿರಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಶ್ರೀರಾಮನು ಲಂಕಾಪತಿ ರಾವಣನ ಸಂಹಾರ ಮಾಡಿದ ನಂತರ ಅಯೋಧ್ಯೆಗೆ ಮರಳುತ್ತಿದ್ದ. ರಾವಣನು ಶಿವನ ಪರಮ ಭಕ್ತನಾಗಿದ್ದ ಕಾರಣ ರಾಮನಿಗೆ ಪಾಪಪ್ರಜ್ಞೆ ಕಾಡಲು ಶುರುವಾಯಿತು.

ಮಾರ್ಗ ಮಧ್ಯದಲ್ಲಿ ಅನೇಕ ಶಿವ ದೇಗುಲಗಳಿಗೆ ಭೇಟಿ ಕೊಟ್ಟು ದರ್ಶನ ಪಡೆದು ಪಾಪ ಪರಿಹರಿಸಿಕೊಳ್ಳಲು ಪ್ರಯತ್ನಿಸಿದ. ಆದರೆ, ಪಾಪದಿಂದ ಮುಕ್ತಿ ಪಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಕಣಿವೆ ಪರಿಸರದಲ್ಲಿ ಧ್ಯಾನಸ್ಥನಾಗಿ ಕುಳಿತು ಕೊಳದಲ್ಲಿ ಸ್ನಾನ ಮಾಡಿ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಿದ. ನಂತರ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಶ್ರೀರಾಮನಿಗೆ ಹರಸಿ ಪಾಪ ವಿಮೋಚನೆ ಮಾಡಿದರು ಎನ್ನುವ ಪ್ರತೀತಿ ಇದೆ.

ಇದೇ ಕಾರಣ ಶಿವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಜನರು ಇಲ್ಲಿಗೆ ಬಂದು ರಾಮತೀರ್ಥ ಹೊಂಡದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿಪ್ರಿಯನಿಗೆ ಪೂಜೆ ಸಲ್ಲಿಸುತ್ತಾರೆ. ದೇಗುಲದ ಸಮೀಪ ಈಗಲೂ ಚಿಕ್ಕದಾದ ಝರಿ ಇದೆ. ಈ ನೀರನ್ನು ಹೊಸದಾಗಿ ಕಟ್ಟಲಾದ ಪುಷ್ಕರಣಿಯಲ್ಲಿ ಸಂಗ್ರಹಿಸಲಾಗಿದೆ. ಚಿಕ್ಕಮಕ್ಕಳು ಮಾತ್ರ ಕೊಳದಲ್ಲಿ ಈಜಾಡಿ ಸಂಭ್ರಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.