ADVERTISEMENT

ಪಡಿತರ ಚೀಟಿ, ಮಾಸಾಶನ ಮಾಡಿಕೊಡಿ: ರಾಜನಾಳದಲ್ಲಿ ತಹಶೀಲ್ದಾರ್‌ಗೆ ಜನರ ಅಳಲು

ನಾಗೇಶ ಪ್ರಭಾ
Published 16 ಅಕ್ಟೋಬರ್ 2021, 13:15 IST
Last Updated 16 ಅಕ್ಟೋಬರ್ 2021, 13:15 IST
ಬೀದರ್ ತಾಲ್ಲೂಕಿನ ರಾಜನಾಳದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಮಹಮ್ಮದ್ ಶಕೀಲ್ ಅವರು ಶನಿವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು
ಬೀದರ್ ತಾಲ್ಲೂಕಿನ ರಾಜನಾಳದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಮಹಮ್ಮದ್ ಶಕೀಲ್ ಅವರು ಶನಿವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು   

ಜನವಾಡ: ಪಡಿತರ ಚೀಟಿ-ಮಾಸಾಶನ ಮಾಡಿಕೊಡಿ, ಗ್ರಾಮಕ್ಕೆ ಬಸ್ ಓಡಿಸಿ, ಇಕ್ಕಟ್ಟಾದ ರಸ್ತೆ ಅಗಲಗೊಳಿಸಿ, ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ....

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಬೀದರ್ ತಾಲ್ಲೂಕಿನ ರಾಜನಾಳದಲ್ಲಿ ನಡೆಸಿದ ಕುಂದು ಕೊರತೆ ಆಲಿಕೆ ಸಭೆಯಲ್ಲಿ ಸಾರ್ವಜನಿಕರು ತಹಶೀಲ್ದಾರ್ ಮಹಮ್ಮದ್ ಶಕೀಲ್ ಅವರಿಗೆ ಸಲ್ಲಿಸಿದ ಮನವಿ ಪತ್ರಗಳು ಇವು.

ಸಲ್ಲಿಕೆಯಾದ ಮನವಿಗಳಲ್ಲಿ ಪಡಿತರ ಚೀಟಿ, ಮಾಸಾಶನಕ್ಕೆ ಸಂಬಂಧಿಸಿದ ಮನವಿಗಳೇ ಅಧಿಕವಾಗಿದ್ದವು. ಬಿಪಿಎಲ್ ಕಾರ್ಡ್ ಮಾಡಿಕೊಟ್ಟು ಬಡ ಕುಟುಂಬಕ್ಕೆ ನೆರವಾಗಿ, ಕಡಿತಗೊಂಡಿರುವ ಬಿಪಿಎಲ್ ಕಾರ್ಡ್ ಮುಂದುವರಿಸಿ, ಮಾಸಾಶನ ಸೌಲಭ್ಯ ಕಲ್ಪಿಸಿಕೊಡಿ ಎಂದು ಅನೇಕರು ಮೊರೆಯಿಟ್ಟರು.

ADVERTISEMENT

ತಹಶೀಲ್ದಾರರು ಪಡಿತರ ಚೀಟಿ ಕಡಿತದ ಬಗ್ಗೆ ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಕೆಲವರ ಪಡಿತರ ಚೀಟಿ ಕಡಿತಗೊಂಡಿಲ್ಲ. ಅಗತ್ಯ ಕೆಲ ದಾಖಲೆ ಹಾಗೂ ಮಾಹಿತಿ ಸಲ್ಲಿಸಿದ ನಂತರ ಸಕ್ರಿಯವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಬೀದರ್‌ನಿಂದ ಗ್ರಾಮಕ್ಕೆ ಬಸ್ ಓಡಿಸಬೇಕು ಎನ್ನುವ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಮಹಮ್ಮದ್ ಶಕೀಲ್ ಅವರು, ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದಲ್ಲಿನ ಇಕ್ಕಟ್ಟಾದ ರಸ್ತೆಗಳನ್ನು ಅಗಲಗೊಳಿಸಬೇಕು ಎನ್ನುವ ಬೇಡಿಕೆ ಹಿನ್ನೆಲೆಯಲ್ಲಿ ಗ್ರಾಮದ ನಕಾಶ ಪರಿಶೀಲಿಸಲಾಗುವುದು. ಅದರ ಆಧಾರದಲ್ಲಿ ರಸ್ತೆ ಅತಿಕ್ರಮಣವಾಗಿದ್ದರೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಅವರು ಗ್ರಾಮದ ಹನುಮಾನ ಮಂದಿರದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರೆಗೆ ಪಾದಯಾತ್ರೆ ನಡೆಸಿದರು. ರಸ್ತೆ, ಚರಂಡಿ, ಕುಡಿಯುವ ನೀರು ಮೊದಲಾದ ಸೌಕರ್ಯಗಳನ್ನು ಪರಿಶೀಲಿಸಿದರು. ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಅವರೊಂದಿಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.