ADVERTISEMENT

ಪೊಲೀಸ್‌ ಠಾಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಬಾವಿಗೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 7:09 IST
Last Updated 24 ಸೆಪ್ಟೆಂಬರ್ 2020, 7:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಮಲನಗರ (ಬೀದರ್‌ ಜಿಲ್ಲೆ): ಪೊಲೀಸರ ವಶದಲ್ಲಿದ್ದ ಯುವಕನೊಬ್ಬ ಗುರುವಾರ ರಾತ್ರಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವ ಭರದಲ್ಲಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

ಕಮಲನಗರ ತಾಲ್ಲೂಕಿನ ಮುರ್ಗ(ಕೆ ) ಗ್ರಾಮದ ಶ್ರೀಮಂತ ಮಹಾದೇವ ಗಾಯಕವಾಡ್ (25) ಮೃತಪಟ್ಟಿದ್ದಾನೆ.

ಬುಧವಾರ ರಾತ್ರಿ 9 ಗಂಟೆಗೆ ಕ್ಷುಲ್ಲಕ ಕಾರಣಕ್ಕೆ ಚಿಕ್ಕಪ್ಪ ಸಂಜೀವಕುಮಾರ ಗಾಯಕವಾಡ್ ಅವರೊಂದಿಗೆ ಜಗಳವಾಡಿ ಅವರ ಮೇಲೆ ಬ್ಲೇಡ್‌ ನಿಂದ ದಾಳಿ ನಡೆಸಿ ಗಾಯಗೊಳಿಸಿದ್ದ. ಸಂಜೀವಕುಮಾರ, ಕಮಲನಗರ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಯುವಕನನ್ನು ಠಾಣೆಗೆ ಕರೆ ತಂದಿದ್ದರು.

ADVERTISEMENT

ರಾತ್ರಿ ಠಾಣೆಯಲ್ಲಿ ಪೊಲೀಸರೊಂದಿಗೂ ಜಗಳ ಮಾಡಿ ನನ್ನನ್ನು ಬಿಡದಿದ್ದರೆ ಕರೆಂಟ್‌ ಹಚ್ಚಿಕೊಂಡು ಇಲ್ಲಿಯೇ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ‍ಪೊಲೀಸರು ಅವನಿಗೆ ತಿಳಿವಳಿಕೆ ನೀಡಿ ಠಾಣೆಯಲ್ಲಿ ಕುಳಿಸಿದ್ದರು. ರಾತ್ರಿ 11 ಗಂಟೆಗೆ ಮೂತ್ರ ವಿಸರ್ಜನೆ ಮಾಡಲು ಹೊರಗೆ ಹೋದಾಗ ಓಡಿ ಹೋಗಿ ಠಾಣೆ ಸಮೀಪದಲ್ಲಿಯೇ ಇರುವ ಅತಿಥಿ ಗೃಹದ ಬಾವಿಗೆ ಹಾರಿದ್ದಾನೆ.

ರಾತ್ರಿಯಾಗಿದ್ದರಿಂದ ಪೊಲೀಸರು ಅವನನ್ನು ತಕ್ಷಣಕ್ಕೆ ಮೇಲಕ್ಕೆ ಎತ್ತಲು ಸಾಧ್ಯವಾಗಲಿಲ್ಲ. ಈಜುಪಟುಗಳು ಸ್ಥಳಕ್ಕೆ ಬಂದು ಶೋಧ ನಡೆಸಿದರೂ ಶವ ದೊರಕಿರಲಿಲ್ಲ. ಗುರುವಾರ ಬೆಳಿಗ್ಗೆ ಶವ ಬಾವಿಯಲ್ಲಿ ತೇಲಾಡುತ್ತಿತ್ತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡಿ, ಡಿವೈಎಸ್‌ಪಿ ದೇವರಾಜ್ ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.