ಚಿಟಗುಪ್ಪ (ಹುಮನಾಬಾದ್): ಓಡಾಡಲು ಸುರಕ್ಷಿತ ರಸ್ತೆ ಇಲ್ಲ, ವ್ಯವಸ್ಥಿತ ಚರಂಡಿ ಇಲ್ಲ, ಕುಡಿಯಲು ಸ್ವಚ್ಛ ನೀರಿಲ್ಲ... ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ತಾಲ್ಲೂಕಿನ ಮಂಗಲಗಿ ಗ್ರಾಮದ ದುಃಸ್ಥಿತಿಗೆ ಹಿಡಿದ ಕೈಗನ್ನಡಿ ಇದು.
ಗ್ರಾಮದ ತುಂಬ ಎಲ್ಲೆಂದರಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕೊಳಚೆ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಪ್ರಮುಖ ರಸ್ತೆಯ ಮೇಲೂ ಚರಂಡಿ ನೀರು ಸಂಗ್ರಹಗೊಂಡು ಸೊಳ್ಳೆಗಳ ತಾಣವಾಗಿದೆ. ಇದರಿಂದ ರೋಗಗಳು ಹರಡುವ ಭೀತಿ ಜನರಲ್ಲಿ ಆವರಿಸಿದೆ ಎನ್ನುವುದು ಗ್ರಾಮಸ್ಥರ ಅಳಲು.
ನೀರಿನ ಟ್ಯಾಂಕ್ ಶಿಥಿಲ:
ಗ್ರಾಮದ ಹನುಮಾನ ದೇವಸ್ಥಾನದ ಎದುರುಗಡೆ ಇರುವ ಕುಡಿಯುವ ನೀರಿನ ಟ್ಯಾಂಕಿಗೂ ಹಾಸು ಹಿಡಿದು ಸಂಪೂರ್ಣ ಶಿಥಿಲಾವಸ್ಥೆಗೆ ಬಂದಿದೆ. ಯಾವಾಗ ನೀರಿಗೂ ಸಂಕಷ್ಟ ಉದ್ಭವವಾಗುವುದೊ ಗೊತ್ತಿಲ್ಲ.
ಮಂಗಲಗಿ ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಅನೇಕ ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಅಂಗಲಾಚಿದ್ದಾರೆ. ಆದರೆ, ಈವರೆಗೂ ಯಾರೂ ನೀರಿನ ಘಟಕ ಸ್ಥಾಪನೆಗೆ ಮನಸು ಮಾಡಿಲ್ಲ. ಈಗಲಾದರೂ ಗ್ರಾಮಕ್ಕೆ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎಂದು ಗ್ರಾಮದ ನಿವಾಸಿ ಶಿವಾರೆಡ್ಡಿ ಮನವಿ ಮಾಡಿದ್ದಾರೆ.
ಹೆಚ್ಚುವರಿ ಬಸ್ ಬಿಡಲು ಆಗ್ರಹ:
ಗ್ರಾಮದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು. ಮಂಗಲಗಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಓವರ್ ಬ್ರಿಡ್ಜ್ ನಿರ್ಮಾಣ ಆದಾಗಿನಿಂದ ಸರ್ಕಾರಿ ಬಸ್ಸುಗಳು ಗ್ರಾಮದ ಮೇಲೆ ನಿಲ್ಲುತ್ತಿಲ್ಲ. ಕಾರಣ ಸಮಸ್ಯೆ ಎದುರಿಸುತ್ತಿದ್ದೇವೆ. ಸಂಬಂಧಪಟ್ಟವರು ಹುಮನಾಬಾದ್‌ಗೆ ಹೋಗುವ ಎಲ್ಲಾ ಬಸ್ಸುಗಳು ಮಂಗಲಗಿ ಗ್ರಾಮದಲ್ಲಿ ನಿಲ್ಲ್ಲುವಂತೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಶೌಚಾಲಯ:
ಗ್ರಾಮದ ಬಹುತೇಕ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಸಾರ್ವಜನಿಕ ಶೌಚಾಲಯವನ್ನೂ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಮಹಿಳೆಯರು ಬಯಲಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ. ಗ್ರಾಮದಲ್ಲಿ ಹಿಂದೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಪಿಡಿಒ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕುಶಿವಾರೆಡ್ಡಿ ನಿವಾಸಿ
ಗ್ರಾಮದ ಸಮಸ್ಯೆ ಗಮನಕ್ಕೆ ಬಂದಿದೆ. ಚರಂಡಿ ನೀರಿನ ಟ್ಯಾಂಕ್ ಸ್ವಚ್ಚತೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದುಬಸಪ್ಪ ಮುರಾಳೆ ಮಂಗಲಗಿ ಪಿಡಿಒ
ನಿರ್ಲಕ್ಷಿತ ಗ್ರಾಮ:
ಮಂಗಲಗಿ ನಿರ್ಲಕ್ಷಿತ ಗ್ರಾಮವಾಗಿದೆ. ಇಷ್ಟೊಂದು ಸಮಸ್ಯೆಗಳಿದ್ದರೂ ಬಂದು ಕೇಳುವವರೇ ಇಲ್ಲ. ಎಲ್ಲದಕ್ಕೂ ಮನವಿ ಮಾಡಿ ಸಾಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ನಡೆದ ಜಲ ಮಿಷನ್ ಯೋಜನೆಯಡಿಯಲ್ಲಿ ರಸ್ತೆಗಳನ್ನು ಅಗೆದಿರುವ ಕಾರಣ ಮತ್ತಷ್ಟು ರಸ್ತೆಗಳು ಈಗ ಹಾಳಾಗಿವೆ. ಜಲ ಮಿಷನ್ ಅಧಿಕಾರಿಗಳು ಇದಕ್ಕೆ ಉತ್ತರಿಸುತ್ತಿಲ್ಲ. ಅಗೆದ ರಸ್ತೆಯನ್ನು ದುರಸ್ತಿ ಮಾಡುವ ಹೊಣೆ ಯಾರದು? ಸಂಬಂಧಪಟ್ಟವರು ಉತ್ತರಿಸಬೇಕು. ರಸ್ತೆ ಸರಿಪಡಿಸಬೇಕು ಎನ್ನುತ್ತಾರೆ ಗ್ರಾಮದ ಜನರು. ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದು ಸ್ಥಳೀಯ ಆಡಳಿತ ಆದ್ಯತೆ ಮೆರೆಗೆ ಎಲ್ಲೆಡೆ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಬೇಕು. ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿ ಅಕ್ಬರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.