ADVERTISEMENT

ಬಸವಕಲ್ಯಾಣ | ‘ಮರಾಠಾ ಕುಣಬಿ ಮೀಸಲಾತಿಗೆ ತೀವ್ರ ಹೋರಾಟ’: ತಾತೇರಾವ್ ಪಾಟೀಲ

ಬಸವಕಲ್ಯಾಣದ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಸಭೆಯಲ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:30 IST
Last Updated 5 ಸೆಪ್ಟೆಂಬರ್ 2025, 6:30 IST
ಮಹಾರಾಷ್ಟ್ರ ಸರ್ಕಾರ ಮನೋಜ ಜರಾಂಗೆ ಪಾಟೀಲ ಅವರ ಬೇಡಿಕೆಗಳನ್ನು ಒಪ್ಪಿದಕ್ಕಾಗಿ ಬಸವಕಲ್ಯಾಣದ ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್‌ನಲ್ಲಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನಿಂದ ಬುಧವಾರ ಸಂಭ್ರಮಾಚರಣೆ ಮಾಡಲಾಯಿತು
ಮಹಾರಾಷ್ಟ್ರ ಸರ್ಕಾರ ಮನೋಜ ಜರಾಂಗೆ ಪಾಟೀಲ ಅವರ ಬೇಡಿಕೆಗಳನ್ನು ಒಪ್ಪಿದಕ್ಕಾಗಿ ಬಸವಕಲ್ಯಾಣದ ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್‌ನಲ್ಲಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನಿಂದ ಬುಧವಾರ ಸಂಭ್ರಮಾಚರಣೆ ಮಾಡಲಾಯಿತು   

ಬಸವಕಲ್ಯಾಣ: ‘ರಾಜ್ಯದ ಮರಾಠಾ ಸಮುದಾಯದವರಿಗೆ ಮರಾಠಾ ಕುಣಬಿ (ಕೃಷಿಕ) ಪ್ರಮಾಣಪತ್ರ ನೀಡಿ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಾತೇರಾವ್ ಪಾಟೀಲ ಮಂಗಳೂರ ತಿಳಿಸಿದರು.

ನಗರದ ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್‌ನಲ್ಲಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನಿಂದ ಬುಧವಾರ ಮಹಾರಾಷ್ಟ್ರ ಸರ್ಕಾರ ಮನೋಜ ಜರಾಂಗೆ ಪಾಟೀಲ ಅವರ ಬೇಡಿಕೆಗಳನ್ನು ಒಪ್ಪಿದಕ್ಕಾಗಿ ಆಯೋಜಿಸಿದ್ದ ಸಂಭ್ರಮಾಚರಣೆ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಮುಖ್ಯಮಂತ್ರಿಗೆ ಈ ಸಂಬಂಧ ಶೀಘ್ರ ಮನವಿಪತ್ರ ಸಲ್ಲಿಸುತ್ತೇವೆ. ಬೆಳಗಾವಿ ಅಧಿವೇಶನದವರೆಗೂ ಅವರು ನಿರ್ಣಯ ಪ್ರಕಟಿಸದಿದ್ದರೆ ಹೋರಾಟ ಆರಂಭಿಸುತ್ತೇವೆ. ವಿಧಾನಸಭೆ ಎದುರಲ್ಲಿ ಉಪವಾಸ ಸತ್ಯಾಗ್ರಹವನ್ನೂ ನಡೆಸುತ್ತೇವೆ’ ಎಂದರು.

ADVERTISEMENT

ಮರಾಠಾ ಸಮಾಜದ ಮುಖಂಡ ಶಂಕರರಾವ್ ನಾಗದೆ ಮಾತನಾಡಿ, ‘ಹೈದರಾಬಾದ್ ನಿಜಾಮರ ಆಡಳಿತದ ಗೆಜೇಟಿಯರ್ ಆಧಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕುಣಬಿ ಪ್ರಮಾಣಪತ್ರ ನೀಡಲು ಒಪ್ಪಿದೆ. ಈಗಿನ ಕಲ್ಯಾಣ ಕರ್ನಾಟಕ ಸಹ ನಿಜಾಮ ಆಡಳಿತದಲ್ಲಿಯೇ ಇದ್ದುದರಿಂದ ಇಲ್ಲಿಯೂ ಕುಣಬಿ ಮರಾಠಾ ಇರುವ ಬಗ್ಗೆ ಗೆಜೇಟಿಯರ್‌ನಲ್ಲಿ ನಮೂದಾಗಿದೆ’ ಎಂದರು.

ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಶಿಂಧೆ ಮಾತನಾಡಿ, ‘ಮರಾಠಾ ಸಮುದಾಯದವರು ಕೃಷಿಕರಿದ್ದರೂ ಶೈಕ್ಷಣಿಕ, ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ಆದ್ದರಿಂದ ಜರಾಂಗೆ ಪಾಟೀಲ ಮುಂಬೈಯಲ್ಲಿ ದೊಡ್ಡ ಮಟ್ಟದಲ್ಲಿ ಧರಣಿ ನಡೆಸಿದ್ದರು. ಈ ಕಾರಣ ಸಮುದಾಯಕ್ಕೆ ಮೀಸಲಾತಿ ಸಿಗುವಂತಾಗಿದ್ದು ಅವರ ಉಪಕಾರ ಮರೆಯಲಾಗದು’ ಎಂದರು.

ಮುಖಂಡ ಅಂಗದರಾವ್ ಜಗತಾಪ, ಪಾರ್ಕ್ ಸಮಿತಿ ಅಧ್ಯಕ್ಷ ದತ್ತಾತ್ರಿ ಧುಳೆ ಪಾಟೀಲ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜ್ಞಾನೇಶ್ವರ ಮುಳೆ, ಬಾಲಾಜಿ ಚಂಡಕಾಪುರೆ, ಶ್ರೀನಿವಾಸ ಪಾಟೀಲ, ತಾತೇರಾವ್ ಬಿರಾದಾರ, ಅಶೋಕ ಶಿಂಧೆ, ದೀಪಕ ನಾಗದೆ, ಕೃಷ್ಣಾ ಗೋಣೆ, ರಾಜಕುಮಾರ ಭೋಸ್ಲೆ, ವಿಜಯಕುಮಾರ ವಕಾರೆ, ರಾಚಣ್ಣ ವಸ್ತ್ರದ, ವಿಕ್ರಮ ಮುಗಳೆ, ಜೀವನರಾವ್ ಶಿರೂರಿ, ಶಿವಾಜಿರಾವ್ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.