ADVERTISEMENT

ಬಸವಕಲ್ಯಾಣ | ದಸರೆಯಲ್ಲಿ ಹುತಾತ್ಮ ದಿನಾಚರಣೆ

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:36 IST
Last Updated 1 ಅಕ್ಟೋಬರ್ 2024, 14:36 IST
ಬಸವಕಲ್ಯಾಣದಲ್ಲಿ ಮಂಗಳವಾರ ಅಕ್ಕ ಗಂಗಾಂಬಿಕಾ ಅವರು ಹುತಾತ್ಮ ದಿನಾಚರಣೆಯ ಆಮಂತ್ರಣ ಪತ್ರಗಳನ್ನು ಬಿಡುಗಡೆ ಮಾಡಿದರು. ಸಿ.ಬಿ.ಪ್ರತಾಪುರೆ, ಬಸವರಾಜ ತೊಂಡಾರೆ, ಶಿವಕುಮಾರ ಬಿರಾದಾರ, ರವಿ ಕೊಳಕೂರ, ಎಸ್.ಜಿ.ಕರ್ಣೆ, ಸಂಜೀವ ಜಾಧವ ಹಾಜರಿದ್ದರು
ಬಸವಕಲ್ಯಾಣದಲ್ಲಿ ಮಂಗಳವಾರ ಅಕ್ಕ ಗಂಗಾಂಬಿಕಾ ಅವರು ಹುತಾತ್ಮ ದಿನಾಚರಣೆಯ ಆಮಂತ್ರಣ ಪತ್ರಗಳನ್ನು ಬಿಡುಗಡೆ ಮಾಡಿದರು. ಸಿ.ಬಿ.ಪ್ರತಾಪುರೆ, ಬಸವರಾಜ ತೊಂಡಾರೆ, ಶಿವಕುಮಾರ ಬಿರಾದಾರ, ರವಿ ಕೊಳಕೂರ, ಎಸ್.ಜಿ.ಕರ್ಣೆ, ಸಂಜೀವ ಜಾಧವ ಹಾಜರಿದ್ದರು   

ಬಸವಕಲ್ಯಾಣ: ‘ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಮತ್ತು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ದಸರಾದಲ್ಲಿ ಅಕ್ಟೋಬರ್ 3ರಿಂದ 12 ರವರೆಗೆ 9 ದಿನ ಸಮಾನತೆ, ಸಹೋದರತೆ, ಸೌಹಾರ್ದತೆಗಾಗಿ ತ್ಯಾಗ, ಬಲಿದಾನಗೈದ 12ನೇ ಶತಮಾನದ ಶರಣ ಹರಳಯ್ಯ ಸೇರಿ ಮತ್ತಿತರೆ ಶರಣರ ಸ್ಮರಣೆಗಾಗಿ ಹುತಾತ್ಮ ದಿನಾಚರಣೆ ಮತ್ತು ಶರಣ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಹೇಳಿದರು.

ನಗರದಲ್ಲಿ ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ,‘ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಪ್ರಸಕ್ತ ಸಾಲಿನ ‘ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ’ ನೀಡಲಾಗುತ್ತದೆ’ ಎಂದರು.

ಅಕ್ಟೋಬರ್ 3ರಂದು ಬಸವಣ್ಣನವರ ಪರುಷಕಟ್ಟೆಯಲ್ಲಿ ವಚನ ಪಠಣ, ಮೆರವಣಿಗೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಅಕ್ಟೋಬರ್ 4 ರಂದು ಸಂಜೆ 6 ಗಂಟೆಗೆ ನಡೆಯುವ ಗೋಷ್ಠಿಯಲ್ಲಿ ಬಸವರಾಜ ಪಾಟೀಲ ಸೇಡಂ ದೀಪ ಬೆಳಗಿಸುವರು. ಸಂಗಮೇಶ ಜವಾದಿ ಬರೆದ ‘ಸೇವೆಯೇ ಶ್ರೇಷ್ಠ ಜೀವನ’ ಗ್ರಂಥ ಬಿಡುಗಡೆ ಆಗಲಿದೆ. ಜ್ಞಾನಭಾರತಿ ಶಾಲೆಯ ಮಕ್ಕಳು ಕಾರ್ಗಿಲ್ ವಿಜಯ ರೂಪಕ ಪ್ರದರ್ಶಿಸುವರು ಎಂದು ತಿಳಿಸಿದರು.

ADVERTISEMENT

ಅ.5ರಂದು ಮಕ್ಕಳ ಸಮಾವೇಶ ನಡೆಯಲಿದೆ. ಸಂಗ್ರಾಮ ಎಂಗಳೆ ನಿರ್ದೇಶನದಲ್ಲಿ ಭೂಮಿತಾಯಿ ನಾಟಕ ಪ್ರದರ್ಶಿಸಲಾಗುತ್ತದೆ. ಅ.6ರಂದು ಮಹಿಳಾ ಮಹಾಶಕ್ತಿಕೂಟಗಳ ಸಮಾವೇಶ ಜರುಗುವುದು. ಜಯಶ್ರೀ ಚಟ್ನಳ್ಳಿ ನಿರ್ದೇಶನದಲ್ಲಿ ಅನುಭವ ಮಂಟಪ ರೂಪಕ ಪ್ರದರ್ಶಿಸಲಾಗುತ್ತದೆ. ಅ.7ರಂದು ಸಂಜೆ ಹಿರಿಯ ನಾಗರಿಕರ ಸಮಾವೇಶ ಜರುಗುವುದು. ಮಹಾದೇವಪ್ಪ ಇಜಾರೆ, ಮಲ್ಲಿಕಾರ್ಜುನ ಅಂಬಲಗೆ ಮತ್ತು ಸುಭಾಷ ರಗಟೆ ಅವರಿಗೆ ‘ಶರಣ ಸೇವಾ ನಾಯಕ ಪ್ರಶಸ್ತಿ’ ನೀಡಲಾಗುತ್ತದೆ. ಗುಂಡಣ್ಣ ಡಿಗ್ಗಿ ಅವರ ಹಾಸ್ಯ ಕಾರ್ಯಕ್ರಮ ನಡೆಯುವುದು ಎಂದರು.

ಅ.9ರಂದು ‘ಬಸವ ಚಳವಳಿ ಅಂದು–ಇಂದು’ ಗೋಷ್ಠಿ ಜರುಗುವುದು. ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಪತ್ರಕರ್ತ ದಿನೇಶ ಅಮಿನಮಟ್ಟು ಅನುಭಾವ ನೀಡುವರು. ಅ.10ರಂದು ಸಂಜೆ ‘ಅನುಭವ ಮಂಟಪದ ಕೊಡುಗೆ’ ಗೋಷ್ಠಿ, ಅ.11ರಂದು ಬೆಳಿಗ್ಗೆ 8 ಗಂಟೆಗೆ 770 ಜನರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಲಿದೆ. ಅಂದು ಮಧ್ಯಾಹ್ನ ಕೋಟೆಯಿಂದ ಮೆರವಣಿಗೆ ನಡೆಯುವುದು. ಅ.12ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.