ADVERTISEMENT

ಮೊಬೈಲ್‌ ನೆಟ್‌ವರ್ಕ್‌ ವಂಚಿತ ಮಾಸಿಮಾಡ

ಅಂತರ್ಜಾಲ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ; ಬಳಕೆ ಬಾರದ ಸ್ಮಾರ್ಟ್‌ಫೋನ್‌

ಗಿರಿರಾಜ ಎಸ್ ವಾಲೆ
Published 2 ಡಿಸೆಂಬರ್ 2022, 5:33 IST
Last Updated 2 ಡಿಸೆಂಬರ್ 2022, 5:33 IST
ಖಟಕಚಿಂಚೋಳಿ ಸಮೀಪದ ಮಾಸಿಮಾಡ ಗ್ರಾಮದಲ್ಲಿರುವ ಟವರ್
ಖಟಕಚಿಂಚೋಳಿ ಸಮೀಪದ ಮಾಸಿಮಾಡ ಗ್ರಾಮದಲ್ಲಿರುವ ಟವರ್   

ಖಟಕಚಿಂಚೋಳಿ: ಸಮೀಪದ ಮಾಸಿಮಾಡ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ.

ಗ್ರಾಮದಲ್ಲಿ 500 ಮನೆಗಳಿವೆ. ಸುಮಾರು 5,000 ಜನ ವಾಸಿಸುತ್ತಾರೆ. ಆದರೆ ಗ್ರಾಮದಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ್ ಬಾರದ ಕಾರಣ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾತ್ರಿ ಸಮಯದಲ್ಲಿ ಚಿಕ್ಕಪುಟ್ಟ ಅವಘಡಗಳು ಸಂಭವಿಸಿದರೆ ಒಬ್ಬರನೊಬ್ಬರು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಶಾಲಾ–ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ADVERTISEMENT

ಪ್ರಸ್ತುತ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ, ಮಾರಾಟ, ಬೇರೆಯವರಿಗೆ ಹಣ ವರ್ಗಾವಣೆ ಮಾಡುವುದು ಸೇರಿ ಇನ್ನಿತರ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಮಾಡುತ್ತಾರೆ. ಆದರೆ ನಮ್ಮ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತುಂಬಾ ಇರುವುದರಿಂದ ಅವೆಲ್ಲವೂ ಕನಸಿನ ಮಾತಾಗಿದೆ ಎಂದು ಗ್ರಾಮದ ಕರಬಸಪ್ಪ ಧೂಳಾ ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮದ ಹೊರವಲಯದ ಮನೆಗಳ ಅಂಗಳದಲ್ಲಿ ಖಾಸಗಿ ಕಂಪನಿಯೊಂದರ ನೆಟ್‌ವರ್ಕ್ ಚೆನ್ನಾಗಿ ಬರುತ್ತದೆ. ಮನೆಯ ಒಳಗಡೆ ಹೋದರೆ ಮಾಯವಾಗುತ್ತದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಮನೆಗಳ ಮೇಲ್ಚಾವಣಿ ಮೇಲೆ ಕುಳಿತು ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಾರೆ. ಆದರೆ ಸದ್ಯ ಚಳಿಗಾಲವಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿ ಬಸವರಾಜ ಪಾಟೀಲ ತಿಳಿಸಿದರು.

ತಕ್ಷಣ ಗ್ರಾಮದಲ್ಲಿ ಮೊಬೈಲ್ ಟವರ್ ಅಳವಡಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಗ್ರಾಮದಲ್ಲಿರುವ ಮೊಬೈಲ್ ನೆಟ್‌ ವರ್ಕ್ ಸಮಸ್ಯೆಯಿಂದ ಕೊರೊನಾದಂಥ ಭೀಕರ ಸಮಯದಲ್ಲಿಯೂ ಗ್ರಾಮದ ಬಹುತೇಕ ಯುವಕರು ಗ್ರಾಮದ ಕಡೆ ಮುಖ ಮಾಡಲಿಲ್ಲ. ವರ್ಕ್‌ ಫ್ರಂ ಹೋಮ್ ಇದ್ದರು ಬರಲಿಲ್ಲ. ಅದಕ್ಕೆ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದೇ ಕಾರಣ ‌‌ಎಂದು ಅರವಿಂದ ಮುದಾಳೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.