ADVERTISEMENT

ಸಾಮೂಹಿಕ ಇಷ್ಟಲಿಂಗ ಯೋಗ

ಸರಳ ವಚನ ವಿಜಯೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 12:47 IST
Last Updated 25 ಫೆಬ್ರುವರಿ 2021, 12:47 IST
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಅಂಗವಾಗಿ ಸಾಮೂಹಿಕ ಇಷ್ಟಲಿಂಗ ಯೋಗ ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಪಾಟೀಲ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಅಂಗವಾಗಿ ಸಾಮೂಹಿಕ ಇಷ್ಟಲಿಂಗ ಯೋಗ ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಪಾಟೀಲ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು   

ಬೀದರ್‌: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖವಾಗಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಬಸವ ಸೇವಾ ಪ್ರತಿಷ್ಠಾನದ ವತಿಯಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ಮೂರು ವಚನ ವಿಜಯೋತ್ಸವಕ್ಕೆ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಬಸವಗಿರಿಯ ಪರುಶ ಕಟ್ಟೆಯ ಆವರಣದಲ್ಲಿ ಚಿಕ್ಕದಾದ ಪೆಂಡಾಲ್‌ ಹಾಕಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಯಿತು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನೂರಾರು ಶರಣ ಶರಣರೆಯರಿಂದ 'ಸಾಮೂಹಿಕ ಇಷ್ಟಲಿಂಗ ಯೋಗ' ನೆರವೇರಿತು.

ಶ್ವೇತ ಉಡುಪು, ಕಾವಿ ಸ್ಕಾರ್ಫ್‌ ತೊಟ್ಟ ಶರಣರು ಹಣೆಯ ಮೇಲೆ ವಿಭೂತಿ ಬಳಿದುಕೊಂಡು ಎಡಗೈಯಲ್ಲಿ ಇಷ್ಟಲಿಂಗವಿರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಅಕ್ಕ ಗಂಗಾಂಬಿಕೆ ಅವರು ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮಕ್ಕಳು ಹಾಗೂ ಯುವಕರಲ್ಲಿ ಪ್ರೇರಣೆ ತುಂಬಿದರು.

ADVERTISEMENT

‘ಬಸವಣ್ಣನವರು ಸ್ವಯಂ ಗುರುವಾಗಿ ಇಷ್ಟಲಿಂಗ ಎನ್ನುವ ವಿನೂತನ ದೇವ ತತ್ವದ ಅಡಿಪಾಯ ಹಾಕಿದ್ದಾರೆ. ಇಷ್ಟಲಿಂಗ ಯೋಗವು ಆರೋಗ್ಯ ಹಾಗೂ ಆಯುಷ್ಯ ಪಡೆಯುವ ವಿಧಾನವಾಗಿದೆ. ಪ್ರತಿಯೊಬ್ಬರು ಶರಣ ತತ್ವ ಪಾಲನೆಯ ಮೂಲಕ ಕೃತಾರ್ಥರಾಗಬೇಕು’ ಎಂದು ಹೇಳಿದರು.

‘ಲಿಂಗ ಪೂಜೆಯ ಮೂಲಕ ಆಧ್ಮಾತ್ಮಿಕ ಶಕ್ತಿಯನ್ನು ಜಾಗೃತ ಮಾಡಿಕೊಳ್ಳಬೇಕು. ವೈಯಕ್ತಿಕ ಪ್ರಗತಿ ಸಾಧಿಸುವ ಮೂಲಕ ಪರಿಸರದ ಅಭಿವೃದ್ಧಿಗೆ ನೆರವಾಗಬಹುದು’ ಎಂದು ತಿಳಿಸಿದರು.

ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಉಷಾ ಮಿರ್ಚೆ ವೇದಿಕೆಯಲ್ಲಿದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಮೀರಾ ಗಿರೀಶ ಖೇಣಿ ಪ್ರಸಾದ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.