ADVERTISEMENT

ಬ್ರಿಮ್ಸ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಎನ್.ಆರ್.ಐ ಕೋಟಾ, ಶುಲ್ಕ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 13:12 IST
Last Updated 19 ಜನವರಿ 2019, 13:12 IST
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಹಾಗೂ ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾವ ವಿರೋಧಿಸಿ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೀದರ್‌ನಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಹಾಗೂ ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾವ ವಿರೋಧಿಸಿ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೀದರ್‌ನಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್‌: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಗೆ ತರುವ ಪ್ರಸ್ತಾವ ಹಾಗೂ ಶುಲ್ಕ ಹೆಚ್ಚಳ ವಿರೋಧಿಸಿ ಎಐಡಿಎಸ್‍ಒ ಹಾಗೂ ಬ್ರಿಮ್ಸ್ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಬ್ರಿಮ್ಸ್ ಆಸ್ಪತ್ರೆಯಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದ ಮನವಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರಿಗೆ ಸಲ್ಲಿಸಿದರು.

ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಹಣಮಂತ ಎಸ್.ಎಚ್. ಮಾತನಾಡಿ, ‘ಸರ್ಕಾರ ಅನಿವಾಸಿ ಭಾರತೀಯರ ಕೋಟಾ ಜಾರಿಗೆ ತರಲು ಹಾಗೂ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ಹೆಚ್ಚಿಸಲು ಮುಂದಾಗಿದೆ. ಪದವಿ ಕೋರ್ಸ್‌ಗಳ ಶುಲ್ಕ ₹17 ಸಾವಿರ ದಿಂದ ₹50 ಸಾವಿರಕ್ಕೆ ಹೆಚ್ಚಿಸಿದೆ. ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ₹3.5ಲಕ್ಷಕ್ಕೆ ಹೆಚ್ಚಿಸಲು ಮುಂದಾಗಿರುವುದು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆಘಾತ ಮೂಡಿಸಿದೆ’ ಎಂದು ತಿಳಿಸಿದರು.

ADVERTISEMENT

‘ಖಾಸಗಿ ಕಾಲೇಜುಗಳಲ್ಲೂ ಎನ್.ಆರ್.ಐ ಕೋಟಾ ಜಾರಿಗೆ ತರುವುದು ಸಂವಿಧಾನ ಬಾಹಿರ ಹಾಗೂ ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 10ರಷ್ಟು ಎನ್.ಆರ್.ಐ ಕೋಟಾ ಜಾರಿ ಮಾಡುವ ಪ್ರಸ್ತಾಪ ಮಾಡಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣಗೊಳ್ಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಕೈಗೆಟಕದಷ್ಟು ದುಬಾರಿಯಾಗಿರುವಾಗ, ಬಡ ವಿದ್ಯಾರ್ಥಿಗಳಿಗೆ ಇದ್ದ ಏಕೈಕ ಆಸರೆಯೆಂದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಓದಿದ ಎಷ್ಟೋ ಬಡ ವಿದ್ಯಾರ್ಥಿಗಳು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಕಾಳಜಿ ತೋರುತ್ತಿದ್ದರು. ಇನ್ನು ಬರುವ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಯಾದರೆ, ಶುಲ್ಕಗಳು ದುಬಾರಿಯಾಗುತ್ತಾ ಹೋದರೆ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಲಿದ್ದಾರೆ’ ಎಂದು ಹೇಳಿದರು.

‘ಇನ್ನು ಲಕ್ಷಾಂತರ-ಕೋಟ್ಯಂತರ ರೂಪಾಯಿ ನೀಡುವವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಸೀಮಿತಗೊಳ್ಳುತ್ತದೆ. ಅಷ್ಟೊಂದು ದುಬಾರಿ ಹಣ ತೆತ್ತ ವಿದ್ಯಾರ್ಥಿಗಳಿಗೆ ಹೂಡಿದ ‘ಬಂಡವಾಳ’ವನ್ನು ವಾಪಸು ಗಳಿಸುವುದೇ ಮುಖ್ಯ ಉದ್ದೇಶವಾಗಿ ಆರೋಗ್ಯ ಸೇವೆಗಳು ದುಬಾರಿಯಾಗಲಿವೆ’ ಎಂದು ತಿಳಿಸಿದರು.

ಬ್ರಿಮ್ಸ್ ವಿದ್ಯಾರ್ಥಿ ಸಂಘದ ಸದಸ್ಯ ಯಶಸ್ ಗಾಂಧಿ ಮಾತನಾಡಿ, ‘ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವ ನೆಪದಲ್ಲಿ ಹೆಚ್ಚಿನ ಶುಲ್ಕ ಪಡೆಯಲು ಮುಂದಾಗಿರುವುದು ಸರಿಯಲ್ಲ’ ಎಂದು ಟೀಕಿಸಿದರು.

‘ವಿದ್ಯಾರ್ಥಿಗಳ ಶುಲ್ಕವನ್ನು ಆದಾಯದ ಮೂಲವೆಂದು ಪರಿಗಣಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು ಎನ್ನುವುದು ಶಿಕ್ಷಣ ತಜ್ಞರ ನಿಲುವಾಗಿದೆ. ಆದ್ದರಿಂದ ಎನ್.ಆರ್.ಐ ಕೋಟಾ ಹಾಗೂ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾವವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಬ್ರಿಮ್ಸ್ ವಿದ್ಯಾರ್ಥಿ ಸಂಘದ ಪ್ರವಿಣ, ಭೀಮನಗೌಡ, ಶಿವಶರಣಪ್ಪ, ಪಲ್ಲವಿ, ನಿಧಿ, ಅರ್ಷದ್, ನಾಗೇಶ, ಗಣೇಶ ಹಾಗೂ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.