ADVERTISEMENT

ಅಂಗವಿಕಲರ ಸಮಸ್ಯೆ ಪರಿಹಾರಕ್ಕೆ ಪ್ರತಿ ತಿಂಗಳು ಸಭೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:45 IST
Last Updated 3 ಡಿಸೆಂಬರ್ 2022, 14:45 IST
ಬೀದರ್‌ನಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು
ಬೀದರ್‌ನಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು   

ಬೀದರ್: ಅಂಗವಿಕಲರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ ತಿಂಗಳು ಸಭೆ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರತ್ನಾಕರ್ ತಿಳಿಸಿದರು.

ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲರ ಬೇಡಿಕೆಯಂತೆ ಸಭೆಯಲ್ಲಿ ಅಂಗವಿಕಲರ ಕುಂದು ಕೊರತೆಗಳನ್ನು ಆಲಿಸಲಾಗುವುದು ಎಂದು ಹೇಳಿದರು.
ಅಂಗವಿಕಲರು ಯಾರಿಗಿಂತಲೂ ಕಡಿಮೆ ಇಲ್ಲ. ಹೀಗಾಗಿ ಕೀಳರಿಮೆ ಹೊಂದಬಾರದು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ ಹೇಳಿದರು.

ADVERTISEMENT

ಅಂಗವಿಕಲರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಪ್ರಾಧಿಕಾರದಿಂದ ಆರು ಅಂಗವಿಕಲರಿಗೆ ಮನೆ ಹಂಚಿಕೆ ಮಾಡಲಾಗಿದೆ. ಪ್ರಾಧಿಕಾರದ ಸೌಲಭ್ಯಗಳನ್ನು ಕಾಲಮಿತಿಯೊಳಗೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಅಂಗವಿಕಲರಿಗಾಗಿ ಇಲಾಖೆಯಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿವೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಘವೇಂದ್ರ ನಾಯ್ಕ್ ತಿಳಿಸಿದರು.

ಅಂಗವಿಕಲರ ವೇತನ, ಪ್ರತಿಭಾವಂತ ವಿದ್ಯಾರ್ಥಿ ಪ್ರೋತ್ಸಾಹ ಧನ, ಸಾಮಾನ್ಯರು ಅಂಗವಿಕರಲನ್ನು ಮದುವೆಯಾದರೆ ₹ 50 ಸಾವಿರ ರೂಪಾಯಿ ಸಹಾಯ ಧನ ಮೊದಲಾದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಪಶು ವೈದ್ಯಾಧಿಕಾರಿ ಗೌತಮ ಅರಳಿ ಮಾತನಾಡಿದರು. ಅಂಗವಿಕಲರ ಹಕ್ಕುಗಳು ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅಂಜಮ್ಮ ಪ್ರಥಮ, ಚಿಂತಮ್ಮ ದ್ವಿತೀಯ ಹಾಗೂ ಭುವನೇಶ್ವರಿ ತೃತೀಯ ಬಹುಮಾನ ಪಡೆದರು. ಪ್ರಮುಖರಾದ ಅನಿಲ್ ಬೆಲ್ದಾರ್, ಮಂಗಲಾ ಮರಕಲೆ ಇದ್ದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.