ADVERTISEMENT

ಸಮಸ್ಯೆ ನಿವಾರಣೆಗೆ ಆರು ತಿಂಗಳು ಗಡುವು

ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 16:46 IST
Last Updated 16 ಜೂನ್ 2020, 16:46 IST
ಬೀದರ್‌ನ ಗೋರನಳ್ಳಿ ಸಮೀಪದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಮಂಗಳವಾರ ವೀಕ್ಷಿಸಿದರು
ಬೀದರ್‌ನ ಗೋರನಳ್ಳಿ ಸಮೀಪದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಮಂಗಳವಾರ ವೀಕ್ಷಿಸಿದರು   

ಬೀದರ್: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಮಂಗಳವಾರ ಇಲ್ಲಿಯ ಗೋರನಳ್ಳಿ ಸಮೀಪದ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು.

ಚಾಲನೆಯಲ್ಲಿದ್ದ ಕೊಳಚೆ ನೀರು ಶುದ್ಧೀಕರಣ ಘಟಕ ವೀಕ್ಷಣೆ ಮಾಡಿ ಬಳಿಕ, ಹತ್ತಿರದಲ್ಲೇ ಇರುವ ಹಳೆ ಕೊಳಚೆ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಸಂಚರಿಸಿದರು.

ಅಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಕೇಳಿದ ಅವರು, ತಾಂತ್ರಿಕ ತೊಂದರೆಯನ್ನು ಬರುವ ಆರು ತಿಂಗಳೊಳಗೆ ಸರಿಪಡಿಸಬೇಕು ಎಂದು ಕೆಯುಐಎಫ್‍ಡಿಸಿಯ ಎಂಜಿನಿಯರ್‌ಗೆ ಗಡುವು ವಿಧಿಸಿದರು.

ADVERTISEMENT

ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಹೋಗಲು ಅಳವಡಿಸಿದ ಸೆಫ್ಟಿಕ್ ಟ್ಯಾಂಕ್‌ನಿಂದ ನೀರು ಪೋಲಾಗುತ್ತಿರುವುದನ್ನು ಗಮನಿಸಿ, ಕೆಯುಐಎಫ್‍ಡಿಸಿ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಾರದೊಳಗೆ ಸೆಫ್ಟಿಕ್ ಟ್ಯಾಂಕ್‍ನ್ನು ಸರಿಪಡಿಸಲು ನಿರ್ದೇಶನ ನೀಡಿದರು.

ಪ್ರಗತಿ ಪರಿಶೀಲನೆ: ಸಚಿವ ಬಿ.ಎ. ಬಸವರಾಜ ಅವರು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರದ ವಸತಿ ಯೋಜನೆಗಳು, ಆರ್ಥಿಕ ಸಂಪನ್ಮೂಲ ಮತ್ತಿತರ ವಿಷಯಗಳ ಪರಿಶೀಲನೆ ನಡೆಸಿದರು.

ಆನ್‍ಲೈನ್ ಮೂಲಕ ಕೃಷಿ ಜಮೀನುಗಳಿಗೆ ಕೃಷಿಯೇತರ ಜಮೀನುಗಳಾಗಿ ಭೂ ಪರಿವರ್ತಿಸಲು ತಾಂತ್ರಿಕ ಅಭಿಪ್ರಾಯ ನೀಡುವ, ಖಾಸಗಿ ಬಡಾವಣೆಗಳ ವಿನ್ಯಾಸ ಅನುಮೋದನೆ, ಪ್ರಾಧಿಕಾರದಿಂದ ವಸತಿ ಯೋಜನೆ ರೂಪಿಸಿ ನಿವೇಶನ ಹಂಚಿಕೆ ಮಾಡುವ ಕುರಿತು ಪ್ರಾಧಿಕಾರದ ಆಯುಕ್ತ ಶರಣಬಸಪ್ಪ ಕೋಟಪ್ಪಗೋಳ ಮಾಹಿತಿ ನೀಡಿದರು.

ಬೀದರ್‌ನಲ್ಲಿ ಈಗಾಗಲೇ ಚಿದ್ರಿ ಮತ್ತು ನೌಬಾದ್ ಗ್ರಾಮಗಳ ಎರಡು ಬಡಾವಣೆಗಳಲ್ಲಿ ವಸತಿ ಯೋಜನೆಗಳು ಅನುಷ್ಠಾನಗೊಂಡಿವೆ. ಹೊಸದಾಗಿ ಗೋರನಳ್ಳಿ (ಬಿ) ಗ್ರಾಮದಲ್ಲಿ ವಸತಿ ಯೋಜನೆ ಕಾಮಗಾರಿ ಅನುಷ್ಠಾನಗೊಳಿಸುವ ಹೊಣೆಯನ್ನು ನಗರಾಭಿವೃದ್ಧಿ ಕೋಶಕ್ಕೆ ವಹಿಸಲಾಗಿದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದರು.

ಶಾಸಕರ ಅಸಮಾಧಾನ: ಬೀದರ್ ನಗರದಲ್ಲಿ ಒಳಚರಂಡಿ ಕಾಮಗಾರಿ ಸರಿಯಾಗಿಲ್ಲ. ಸಮರ್ಪಕ ನಿರ್ವಹಣೆಯೂ ಆಗುತ್ತಿಲ್ಲ. ಉದ್ಯಾನಗಳು ಅತಿಕ್ರಮಣವಾಗಿವೆ. ಒಳ ಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಸರಿಯಾಗಿ ದುರಸ್ತಿಪಡಿಸಿಲ್ಲ ಎಂದು ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್ ಹಾಗೂ ಅರವಿಂದಕುಮಾರ ಅರಳಿ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವರು, ‘ನಗರದಲ್ಲಿನ ಯುಜಿಡಿ ಮತ್ತು ಉದ್ಯಾನಗಳ ನಿರ್ವಹಣೆ ಸಮರ್ಪಕವಾಗಿ ನಡೆಯಲು ಕ್ರಮ ವಹಿಸಬೇಕು. ನಗರೋತ್ಥಾನ ಹಂತ 3ರಲ್ಲಿನ ನೂನ್ಯತೆಗಳನ್ನು ಸರಿಪಡಿಸಬೇಕು. ಕೆಯುಐಡಿಎಫ್‍ಸಿನ ಎಂಜಿನಿಯರ್ ವಾರದಲ್ಲಿ ಮೂರು ದಿನಗಳ ಕಾಲ ಬೀದರ್‍ನಲ್ಲಿದ್ದು ಕೆಲಸ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಶಾಸಕ ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.