ಮಿರ್ಜಾಪುರ(ತಾಜ್)(ಜನವಾಡ): ಬೀದರ್ ತಾಲ್ಲೂಕಿನ ಮಿರ್ಜಾಪುರ(ತಾಜ್) ಗ್ರಾಮದಲ್ಲಿ ‘ಮನೆ ಮನೆಗೆ ಗಂಗೆ’ ಇನ್ನೂ ನಾಮಫಲಕದಲ್ಲೇ ಉಳಿದಿದ್ದಾಳೆ.
ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಆರಂಭಿಸುವಾಗ ಕಾಮಗಾರಿಯ ಮಾಹಿತಿ ಒಳಗೊಂಡಂತೆ ‘ಮನೆ ಮನೆಗೆ ಗಂಗೆ’ ಎಂಬ ನಾಮಫಲಕ ಹಾಕಲಾಗಿದೆ. ಆದರೆ, ಎರಡೂವರೆ ವರ್ಷ ಕಳೆದರೂ ಗಂಗೆ ಮನೆ ಮನೆಗೆ ತಲುಪಿಲ್ಲ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2023ರ ಅಕ್ಟೋಬರ್‌ನಲ್ಲೇ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗಬೇಕಿತ್ತು.
ರಾಜ್ಯ, ಕೇಂದ್ರದ ಪಾಲು ಹಾಗೂ ಸಮುದಾಯ ವಂತಿಕೆ ಸೇರಿದಂತೆ 300 ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಯ ಒಟ್ಟು ಮೊತ್ತ ₹1.80 ಕೋಟಿ ಆಗಿದೆ.
‘ಗ್ರಾಮದಲ್ಲಿ 2023ರ ಜನವರಿ 3ರಂದು ಆರಂಭವಾದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಅರ್ಧದಲ್ಲೇ ನಿಂತಿದೆ’ ಎಂದು ದೂರುತ್ತಾರೆ ಗ್ರಾಮದ ರಾಜಕುಮಾರ ಮೇತ್ರೆ.
ಯೋಜನೆಯಡಿ ನೀರು ಪೂರೈಕೆಗೆ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ. ತೆರೆದ ಬಾವಿ ತೋಡಲಾಗಿದೆ. ಎರಡು ಕೊಳವೆಬಾವಿ ಕೊರೆಸಲಾಗಿದೆ. ರಸ್ತೆಗಳನ್ನು ಅಗೆದು ಪೈಪ್‍ಲೈನ್ ಮಾಡಲಾಗಿದೆ. ಮನೆ ಮುಂದೆ ನಲ್ಲಿ ಕೂಡಿಸಲಾಗಿದೆ. ನಲ್ಲಿಗಳಿಗೆ ಎಲ್ಲೆಡೆ ಪೈಪ್‍ಲೈನ್ ಸಂಪರ್ಕ ಕೊಡಲಾಗಿಲ್ಲ ಎಂದು ಹೇಳುತ್ತಾರೆ.
ಗುಣಮಟ್ಟದ ಪೈಪ್‍ಗಳನ್ನು ಬಳಸಿಲ್ಲ. ಪೈಪ್ ಅಳವಡಿಸಿದ ನಂತರ ಅಗೆದ ರಸ್ತೆ ಸರಿಯಾಗಿ ಮುಚ್ಚಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ಸದ್ಯ ಗ್ರಾಮಸ್ಥರು ಕುಡಿಯುವ ನೀರಿಗೆ ಗ್ರಾಮ ಪಂಚಾಯಿತಿಯ ನಲ್ಲಿಗಳನ್ನು ಅವಲಂಬಿಸಿದ್ದಾರೆ ಎಂದು ಹೇಳುತ್ತಾರೆ.
ಸಂಬಂಧಪಟ್ಟವರು ಕೂಡಲೇ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.
ನಿಗದಿತ ಕಾಲಮಿತಿಯಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಶುದ್ಧ ನೀರು ಪಡೆಯುವ ಗ್ರಾಮಸ್ಥರ ಕನಸು ನನಸಾಗಿಲ್ಲರಾಜಕುಮಾರ ಮೇತ್ರೆ ಮಿರ್ಜಾಪುರ(ತಾಜ್) ಗ್ರಾಮಸ್ಥ
ಗ್ರಾಮದಲ್ಲಿ ಯೋಜನೆಯ ಶೇ 70 ರಷ್ಟು ಕಾಮಗಾರಿ ಮುಗಿದಿದೆ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆಬಸವರಾಜ ಪಾಟೀಲ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ–2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.