ADVERTISEMENT

ವಸತಿ ಯೋಜನೆ ಹಣ ತಡೆ ಹಿಡಿದ ಬಿಜೆಪಿ: ಶಾಸಕ ಈಶ್ವರ ಖಂಡ್ರೆ ಆರೋಪ

ಪುರಸಭೆ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 4:27 IST
Last Updated 13 ಮಾರ್ಚ್ 2021, 4:27 IST
ಭಾಲ್ಕಿಯ ಪುರಸಭೆ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಈಶ್ವರ ಖಂಡ್ರೆ ಅವರನ್ನು ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ನೇತೃತ್ವದಲ್ಲಿ ಎಲ್ಲ ಸದಸ್ಯರು ಸನ್ಮಾನಿಸಿದರು
ಭಾಲ್ಕಿಯ ಪುರಸಭೆ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಈಶ್ವರ ಖಂಡ್ರೆ ಅವರನ್ನು ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ನೇತೃತ್ವದಲ್ಲಿ ಎಲ್ಲ ಸದಸ್ಯರು ಸನ್ಮಾನಿಸಿದರು   

ಭಾಲ್ಕಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುತ್ತಲೇ ಸಂಸದ ಖೂಬಾ, ಸ್ಥಳೀಯ ಬಿಜೆಪಿ ಮುಖಂಡರು ಸೇರಿ ಸರ್ಕಾರದ ಮೇಲೆ ಒತ್ತಡ ತಂದು ವಸತಿ ಮನೆ ಹಣ ತಡೆ ಹಿಡಿದಿದ್ದಾರೆ’ ಎಂದು ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಆಡಳಿತ ಮಂಡಳಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಸಂಸದ ಭಗವಂತ ಖೂಬಾ ಹಾಗೂ ಬಿಜೆಪಿ ಮುಖಂಡರು ಅಡ್ಡಿ ಆಗುತ್ತಿದ್ದಾರೆ. ತಾಲ್ಲೂಕಿನಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲು ಮಂಜೂರು ಆಗಿದ್ದ ₹35 ಕೋಟಿ, ಕೆಕೆಆರ್‌ಡಿಬಿಯ ₹50 ಕೋಟಿ, ನಂಜುಂಡಪ್ಪ ವರದಿ ಕಾಮಗಾರಿ, ನೀರಾವರಿ ಯೋಜನೆ ಸೇರಿ ಮತ್ತಿತರ ಕಾಮಗಾರಿಗಳಿಗೆ ಅನುದಾನ ತಡೆದು ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ತಾವು ಸಂಸದರಾಗಿದ್ದೀರಿ ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ವಿವಿಧ ಯೋಜನೆ, ಮನೆ ತಂದು ಹಂಚಿಕೆ ಮಾಡಿ ಜನರ ಋಣ ತೀರಿಸಿ ಅದನ್ನು ಬಿಟ್ಟು, ಸುಖಾಸುಮ್ಮನೇ ನಮ್ಮ ತಂಟೆಗೆ ಬಂದರೆ ತಕ್ಕಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಶಂಕುಸ್ಥಾಪನೆ, ಉದ್ಘಾಟನೆ, ಸನ್ಮಾನ, ಅಭಿನಂದನೆಯನ್ನಯ ಬಯಸುವ ಜಾಯಮಾನ ನನ್ನದಲ್ಲ. ನಾನು ಪೌರಾಡಳಿತ ಸಚಿವನಿದ್ದ ಸಂದರ್ಭದಲ್ಲಿ ಪುರಸಭೆ ಕಟ್ಟಡಕ್ಕೆ ₹5 ಕೋಟಿ ಅನುದಾನ ನೀಡಿದ್ದೆ, ಹೀಗಾಗಿ ಪುರಸಭೆ ಆಡಳಿತ ಮಂಡಳಿ ಅಭಿನಂದನಾ ಸಮಾರಂಭ ಏರ್ಪಡಿಸಿದೆ’ ಎಂದರು.

‘ಇದನ್ನು ತಡೆಯಲು ಸಂಸದ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಎಸ್ಪಿ ಹೀಗೆ ಮತ್ತಿತರಿಗೆ ಸೂಚನೆ ನೀಡಿರುವುದು ನಾಚೀಕೆಗೇಡಿನ ಸಂಗತಿ’ ಎಂದು ಆಕ್ರೋಶ ಹೊರ ಹಾಕಿದರು.

‘ಇಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ನೂತನ ಪುರಸಭೆ ಕಟ್ಟಡ ಸಿದ್ಧವಾಗಿದೆ. ಹಳೆ ಕಟ್ಟಡದಲ್ಲಿ ಪುರಸಭೆ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಜನರ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ಶಿಷ್ಟಾಚಾರ ಪಾಲಿಸಿದರೆ ಕಟ್ಟಡ ಉದ್ಘಾಟನೆ ವಿಳಂಬ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪೂಜೆ ನೆರವೇರಿಸಿ ನೂತನ ಪುರಸಭೆ ಕಟ್ಟಡಕ್ಕೆ ಕಚೇರಿ ಶಿಫ್ಟ್ ಮಾಡಬೇಕು ಎನ್ನುವ ಉದ್ದೇಶವಿತ್ತು. ಆದರೆ, ವಿರೋಧಿಗಳು ಇದನ್ನೇ ದೊಡ್ಡ ವಿಷಯ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಇಂತವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ತೀರುಗೇಟು ನೀಡಿದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ತಾ.ಪಂ. ಅಧ್ಯಕ್ಷೆ ಮೀರಾಬಾಯಿ ಕಣಜೆ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷೆ ರಾಜೇಶ್ವರಿ ರಾಜಕುಮಾರ ಮೊರೆ, ವಿಜಯಕುಮಾರ ರಾಜಭವನ, ರಾಜಕುಮಾರ ವಂಕೆ, ಅನಿಲ್‌ ಸುಂಟೆ, ಮಾಣಿಕಪ್ಪ ರೇಷ್ಮೆ, ಅಶೋಕ ಗಾಯಕವಾಡ್, ಬಾಲಾಜಿ ಖೇಡಕರ್, ಓಂಕಾರ ಮೊರೆ, ರಾಹುಲ್‌ ಪೂಜಾರಿ, ಮಾರುತಿ ಭಾವಿಕಟ್ಟಿ, ಎಪಿಎಂಸಿ ಅಧ್ಯಕ್ಷ ಬನಸಿಲಾಲ್ ಬೊರಾಳೆ, ಜೀವನ ಪೆದ್ದೆ ಇದ್ದರು.
ಅಶೋಕ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು. ಗಣಪತರಾವ್‌ ಕಲ್ಲೂರೆ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.