ADVERTISEMENT

ಜನಾಭಿಪ್ರಾಯವೇ ಅಂತಿಮವಾಗಲಿ: ವಿಜಯಸಿಂಗ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:27 IST
Last Updated 19 ಡಿಸೆಂಬರ್ 2019, 9:27 IST
ವಿಜಯಸಿಂಗ್‌
ವಿಜಯಸಿಂಗ್‌   

ಬೀದರ್: ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಜನರ ಅಭಿಪ್ರಾಯವೇ ಅಂತಿಮವಾಗಬೇಕು. ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ಒಪ್ಪಿಕೊಳ್ಳಲಾಗದು ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ತಿಳಿಸಿದ್ದಾರೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣಕ್ಕೆ ಈವರೆಗೆ ನಾಲ್ಕು ಜಾಗಗಳನ್ನು ಗುರುತಿಸಲಾಗಿದೆ. ಸಮತಟ್ಟಾಗಿಲ್ಲ, ನೀರಿನ ಮೂಲಗಳಿಲ್ಲ, ಜನರಿಗೆ ಹೋಗಿ ಬರಲು ತೊಂದರೆಯಾಗಲಿದೆ ಎನ್ನುವ ಕಾರಣಕ್ಕೆ ಚಿಕ್ಕಪೇಟ ಹಾಗೂ ಮಾಮನಕೇರಿ ಗುಡ್ಡದಲ್ಲಿ ಗುರುತಿಸಿದ್ದ ಜಾಗಗಳನ್ನು ಕೈಬಿಡಲಾಗಿತ್ತು. ನಂತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಜನರ ಅಭಿಪ್ರಾಯ ಪಡೆದು ಸರ್ವ ಸಮ್ಮತಿಯಿಂದ ಸದ್ಯದ ಜಿಲ್ಲಾಧಿಕಾರಿ ಕಚೇರಿ ಜಾಗದಲ್ಲೇ ನಿರ್ಮಿಸಲು ನಿರ್ಣಯಿಸಲಾಗಿತ್ತು ಎಂದು ಹೇಳಿದ್ದಾರೆ.

ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ದಿಢೀರ್ ತೋಟಗಾರಿಕೆ ಕಾಲೇಜಿಗೆ ಮಂಜೂರು ಮಾಡಲಾದ ಕೊಳಾರ(ಕೆ) ಸಮೀಪದ ರೇಷ್ಮೆ ಇಲಾಖೆಯ ಜಾಗವನ್ನು ಅಂತಿಮಗೊಳಿಸಿರುವುದು ಆಶ್ಚರ್ಯಗೊಳಿಸಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಹಿಂದಿನ ಸರ್ವ ಸಮ್ಮತಿಯ ಜಾಗವನ್ನು ಏಕೆ ಬದಲಿಸಿದರು ಎನ್ನುವುದು ತಿಳಿಯದಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತೋಟಗಾರಿಕೆ ಕಾಲೇಜು ಹಾಗೂ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ರೇಷ್ಮೆ ಇಲಾಖೆ ಜಾಗದಲ್ಲಿ ಸಂಕೀರ್ಣ ನಿರ್ಮಿಸುವ ನಿರ್ಧಾರವನ್ನು ಕೈಬಿಡಬೇಕು. ಸದ್ಯದ ಜಿಲ್ಲಾಧಿಕಾರಿ ಕಚೇರಿ ಜಾಗದಲ್ಲೇ ಸಂಕೀರ್ಣ ನಿರ್ಮಿಸಬೇಕು. ಈಗಾಗಲೇ ಸಂಕೀರ್ಣಕ್ಕೆ ಅನುದಾನ ಬಿಡುಗಡೆಯಾಗಿರುವ ಕಾರಣ ಕೂಡಲೇ ಕಾಮಗಾರಿಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.