ಹುಲಸೂರ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಕಳೆದ ಏಳು ದಿನಗಳಿಂದ ಗುಣಮಟ್ಟದ ಶಿಕ್ಷಣ, ಉಪಹಾರ ಇಲ್ಲದೆ ವಾರ್ಡನ್ ಬೇಜವಾಬ್ದಾರಿಯಿಂದ ಜೀವಭಯದಲ್ಲಿ ರಾತ್ರಿ ಕಳೆಯುತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ದಸರಾ ಹಬ್ಬದ ರಜೆಯ ನಂತರ ಅ.21 ರಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಿಡಲು ಪ್ರಾಂಶುಪಾಲರು ಆದೇಶ ನೀಡಿದ್ದರು. 6 ರಿಂದ 10ನೇ ತರಗತಿ ವರೆಗೆ ಒಟ್ಟು 230ಕ್ಕಿಂತ ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದು ಅದರಲ್ಲಿ 40 ಜನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಂದು ಬಿಟ್ಟಿದ್ದರು.
ಆದರೆ ವಾರ ಕಳೆದರೂ ಪ್ರಾಂಶುಪಾಲ ಹಾಗೂ ವಾರ್ಡನ್ ವಸತಿ ನಿಲಯದಲ್ಲಿ ವಾಸವಾಗದೆ ಮಕ್ಕಳ ಜವಾಬ್ದಾರಿಯನ್ನು ಕಾವಲುಗಾರರಿಗೆ ವಹಿಸಿ ಹೋಗಿದ್ದಾರೆ. ಇದರಿಂದ ಬೇಸರಗೊಂಡ ಪೋಷಕರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿಲೀಪ್ ಗೌತಮ ಅವರನ್ನು ಸಂಪರ್ಕಿಸಿದಾಗ, ‘ನಾನು ಈಗ ಸಭೆಯಲ್ಲಿರುವೆ ದೂರು ನೀಡಿದ ಪಾಲಕರ ದೂರವಾಣಿ ಸಂಖ್ಯೆ ಕೊಡಿ’ ಎಂದು ಪ್ರತಿಕ್ರಿಯಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿಂಧು, ‘ನಾನು ಈಗ ಸ್ಥಳೀಯವಾಗಿಲ್ಲ. ಅಧಿಕಾರಿಗಳ ಆದೇಶವಿಲ್ಲದೆ ಶಾಲಾ ಆವರಣದಲ್ಲಿ ಪತ್ರಕರ್ತರು ಹೋಗುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ ಹಾಗೂ ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.