ಬೀದರ್: ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಸಾಹಿತಿ ಕಾಶಿನಾಥ ಅಂಬಲಗಿ ಅವರು ವೃತ್ತಿಯಿಂದ ಹಿಂದಿ ಮೇಷ್ಟ್ರು. ಆದರೆ, ಪ್ರವೃತ್ತಿಯಿಂದ ಕವಿ, ಲೇಖಕ.
ಹಿಂದಿ, ಉರ್ದು, ಪಂಜಾಬಿ ಸೇರಿದಂತೆ ಹಲವು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ಹೆಗ್ಗಳಿಕೆ ಅವರದು. ಕವಿ, ಲೇಖಕ, ಸಾಹಿತಿ, ಕಾದಂಬರಿಕಾರ, ಅನುವಾದಕರಾಗಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ.
ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಒಟ್ಟು 72 ಕೃತಿಗಳನ್ನು ರಚಿಸಿದ್ದಾರೆ. 26 ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಹಿಂದಿ ಮೇಷ್ಟ್ರರಾಗಿದ್ದರೂ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿರುವುದು ವಿಶೇಷ. ಪಂಜಾಬಿ ಭಾಷೆಯಲ್ಲಿಯೂ ಕವಿತೆಗಳನ್ನು ರಚಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮ ಅವರ ಹುಟ್ಟೂರು. ಆದರೆ, ಸದ್ಯ ಅವರು ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಬೀದರ್‌ನಲ್ಲಿ ಪ್ರಾಥಮಿಕ–ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿಸಿ ಆನಂತರ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೀದರ್‌ನಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಬಸವಕಲ್ಯಾಣದ ಖೂಬಾ ಕಾಲೇಜು, ಕಲಬುರಗಿಯ ಎಸ್‌ಬಿ ಕಾಲೇಜು, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಶಿಕ್ಷಕ, ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಲೇ ಸಾಹಿತ್ಯದ ಕೃಷಿ ಮಾಡಿರುವುದು ವಿಶೇಷ. ಹುಲ್ಲ ಮೇಲಿನ ಹನಿಗಳು (ಮಿನಿ ಕವಿತೆ), ಕೌದಿ (ಕಾವ್ಯ), ಶರಣರು ಹಾಗೂ ಸಂತರ ಸಾಮಾಜಿಕ ಕಾಳಜಿ, ಚುಳುಕಾದಿರಯ್ಯಾ (ಕಾವ್ಯ), ಬೇವು ಬೆಲ್ಲ (ಮಿನಿ ಕವಿತೆ), ಹಾಡುಗಳು ಉಳಿದಾವ (ಕಾವ್ಯ), ಮೂವತ್ತಕ್ಕೆ ಮುನ್ನೂರು (ಕಾವ್ಯ), ಶರಣು ಶರಣಾರ್ಥಿ ಗಜಲ್ (ಕಾವ್ಯ) ಪ್ರಮುಖವಾದವುಗಳು.
ಅಧೂರೆ ಶಬ್ದ (ಕವಿತೆ), ‘ಸಂತೋ ಔರ ಶಿವಶರಣೋಂ ಕೆ ಕಾವ್ಯ ಮೆ ಸಾಮಾಜಿಕ ಚೇತನಾ’ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದಿಂದ ಹಿಂದಿಗೂ ಹಲವಾರು ಕೃತಿಗಳು ಅನುವಾದಿಸಿದ್ದಾರೆ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕ, ಜಿ.ಎಸ್. ಶಿವರುದ್ರಪ್ಪ, ಕಣವಿ, ರಂಜಾನ ದರ್ಗಾ ಅವರ ಕವಿತೆಗಳನ್ನೂ ಹಿಂದಿಗೆ ಅನುವಾದಿಸಿ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸಾಹಿತ್ಯಕ್ಕೆ ಇವರು ಕೊಟ್ಟಿರುವ ಕೊಡುಗೆಯನ್ನು ಪರಿಗಣಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಇವರ ಹೆಸರು ಶಿಫಾರಸು ಕೂಡ ಮಾಡಿತು. ಗಜಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಶಿನಾಥ ಅಂಬಲಗಿ ಅವರು ಹಿಂದಿ ಮೇಷ್ಟ್ರರಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಅವರ ಕೃತಿಗಳೇ ಇದಕ್ಕೆ ಸಾಕ್ಷಿ. ಈ ಭಾಗದ ಅತಿದೊಡ್ಡ ಸಾಹಿತಿ.– ಬಸವರಾಜ ಬಲ್ಲೂರ, ಸಾಹಿತಿ ಪ್ರಾಚಾರ್ಯ
ಸಮ್ಮೇಳನ ಇಂದು
ಕರ್ನಾಟಕ ಗಜಲ್ ಅಕಾಡೆಮಿ ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ (ಸೆ.7) ಬೆಳಿಗ್ಗೆ 10.15ಕ್ಕೆ ಬೀದರ್‌ನ ನೌಬಾದ್‌ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನವನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಹತ್ತು ಕೃತಿಗಳನ್ನು ಬಿಡುಗಡೆಗೊಳಿಸುವರು. ಪೌರಾಡಳಿತ ಸಚಿವ ರಹೀಂ ಖಾನ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕವಿ ಕಾಶಿನಾಥ ಅಂಬಲಗೆ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ವಹಿಸುವರು. ಉದ್ಘಾಟನಾ ಸಮಾರಂಭದ ನಂತರ ಗೋಷ್ಠಿಗಳು ಜರುಗಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.