ADVERTISEMENT

ಕಾಮಗಾರಿಗಳ ಪರಿಶೀಲನೆಗೆ ತಂಡ ರಚನೆ

ಯೋಜನೆ ಅನುಷ್ಠಾನದಲ್ಲಿ ವಿಳಂಬ: ಸಾಮಾನ್ಯ ಸಭೆಯಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 15:11 IST
Last Updated 5 ಸೆಪ್ಟೆಂಬರ್ 2018, 15:11 IST
ಬೀದರ್‌ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಮನ್ಸೂರ್‌ ಖಾದ್ರಿ ಹಾಗೂ ನಬಿ ಖುರೇಶಿ ನಡುವೆ ಮಾತಿನ ಚಕಮಕಿ ನಡೆಯಿತು
ಬೀದರ್‌ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಮನ್ಸೂರ್‌ ಖಾದ್ರಿ ಹಾಗೂ ನಬಿ ಖುರೇಶಿ ನಡುವೆ ಮಾತಿನ ಚಕಮಕಿ ನಡೆಯಿತು   

ಬೀದರ್‌: ನಗರದಲ್ಲಿ ಬಾಕಿ ಉಳಿದಿರುವ ನಿರಂತರ ನೀರು ಯೋಜನೆಯ ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವಂತೆ ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಪರಿಶೀಲಿಸಲು ನಗರಸಭೆಯು ಅಧಿಕಾರಿಗಳ ತಂಡವೊಂದನ್ನು ರಚಿಸಿತು.

ಶಾಲಿನಿ ರಾಜು ಚಿಂತಾಮಣಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರಂತರ ನೀರು ಪೂರೈಕೆ ಯೋಜನೆಯ ಕಳಪೆ ಕಾಮಗಾರಿಯ ಬಗ್ಗೆ ಕೋಲಾಹಲ ಸೃಷ್ಟಿಯಾದಾಗ ಆಯುಕ್ತ ಮನೋಹರ ಮಧ್ಯ ಪ್ರವೇಶಿಸಿ ತಂಡ ರಚಿಸುವ ತೀರ್ಮಾನ ಪ್ರಕಟಿಸಿದರು.

‘ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್, ನಗರಸಭೆಯ ಸಹಾಯಕ ಎಂಜಿನಿಯರ್‌ ಹಾಗೂ ಆಯಾ ವಾರ್ಡ್‌ಗಳ ಸದಸ್ಯರು ತಂಡದಲ್ಲಿ ಇರುವರು. ತಂಡ ನಿತ್ಯ ಎರಡು ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಲಿದೆ. ಹದಿನೈದು ದಿನಗಳಲ್ಲಿ ಎಲ್ಲ ವಾರ್ಡ್‌ಗಳ ಪರಿಶೀಲನೆ ಪೂರ್ಣಗೊಳಿಸಿ ಸಮಗ್ರವಾದ ವರದಿಯನ್ನು ನಗರಸಭೆಗೆ ಸಲ್ಲಿಸಲಿದೆ’ ಎಂದು ಹೇಳಿದರು.

ADVERTISEMENT

‘ವರದಿ ಬಂದ ನಂತರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿಯೇ ವಿಶೇಷ ಸಾಮಾನ್ಯ ಸಭೆ ಕರೆಯಲಾಗುವುದು. ಸದಸ್ಯರು ಆ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು’ ಎಂದು ತಿಳಿಸಿದರು.

ಇದಕ್ಕೂ ಮೊದಲು ಸದಸ್ಯರು ಮಾತನಾಡಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಜನರಿಗೆ ನೀರು ದೊರೆಯುತ್ತಿಲ್ಲ. ಜನರ ಪರದಾಟ ನಿಂತಿಲ್ಲ ಎಂದು ಕಿಡಿಕಾರಿದರು.

ಓಲ್ಡ್‌ಸಿಟಿಯಲ್ಲಿ ಸ್ಥಿತಿ ಇನ್ನೂ ಗಂಭೀರವಾಗಿದೆ. ಹಳೆಯ ಪೈಪ್‌ಲೈನ್‌ಗಳಲ್ಲೂ ನೀರು ಹರಿಯುತ್ತಿದೆ. ಹೊಸ ಪೈಪ್‌ಲೈನ್‌ಗಳಿಂದ ನೀರು ಪೋಲಾಗುತ್ತಿದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅಚ್ಚುಕಟ್ಟಾಗಿದ್ದ ಸಿಸಿ ರಸ್ತೆ ಹಾಗೂ ಡಾಂಬರ್‌ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ ಎಂದು ದೂರಿದರು.

ಸದಸ್ಯ ಮನ್ಸೂರ್‌ ಖಾದ್ರಿ ಮಾತನಾಡಿ, ‘ಕುಡಿಯುವ ನೀರಿನ ಯೋಜನೆಗೆ ₹ 45 ಕೋಟಿ ಖರ್ಚು ಮಾಡಿದರೂ ಚಿದ್ರಿ ನಿವಾಸಿಗಳಿಗೆ ನೀರು ಸಿಗುತ್ತಿಲ್ಲ. ಜನರು ಕುಡಿಯುವ ನೀರಿಗಾಗಿ ಅಲೆಯುತ್ತಿರುವುದು ತಪ್ಪಿಲ್ಲ. ಇಂತಹ ಯೋಜನೆಗಳಿಂದ ಜನರಿಗೆ ಏನು ಪ್ರಯೋಜನ’ ಎಂದು ಖಾರವಾಗಿ ಪ್ರಶ್ನಿಸಿದರು.

ನಾಗಶೆಟ್ಟಿ ಮಾತನಾಡಿ, ‘30ನೇ ವಾರ್ಡ್‌ನಲ್ಲಿ 1,200 ಮನೆಗಳಿದ್ದರೂ ಅಧಿಕಾರಿಗಳಿಗೆ ಕನಿಷ್ಠ 500 ಮನೆಗಳಿಗೂ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಗುತ್ತಿಗೆದಾರರು ಉತ್ತಮ ರಸ್ತೆಗಳನ್ನು ಅಗೆದು ಹಾಳು ಮಾಡಿ ಹೋಗಿದ್ದಾರೆ. ಹೊಸ ಪೈಪ್‌ಲೈನ್‌ ಸಹ ಅಳವಡಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯ ಸಹಾಯಕ ಎಂಜಿನಿಯರ್‌ ಮೊಯಿಸ್‌ ಹುಸೇನ್‌ ಅವರು, ನಗರ ನೀರು ಸರಬರಾಜು ಮಂಡಳಿಯು ಐದು ವಲಯಗಳಲ್ಲಿ ಸರಿಯಾಗಿ ಕಾಮಗಾರಿ ಕೈಗೊಳ್ಳದೆ ನಗರಸಭೆಗೆ ಒಪ್ಪಿಸಿದೆ. ಇದರಿಂದ ನಗರಸಭೆ ತೊಂದರೆ ಅನುಭವಿಸಬೇಕಾಗಿದೆ’ ಎಂದರು.

ಸದಸ್ಯರಾದ ನಬಿ ಖುರೇಶಿ ಹಾಗೂ ಧನರಾಜ್‌ ಹಂಗರಗಿ ಸಹ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.