ADVERTISEMENT

ನಗರಸಭೆ ಚುನಾವಣೆ: ಶಾಂತಿಯುತ ಮತದಾನ

ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:51 IST
Last Updated 27 ಏಪ್ರಿಲ್ 2021, 16:51 IST
ಬೀದರ್‌ನ ವಾರ್ಡ್ ಸಂಖ್ಯೆ 2ರಲ್ಲಿರುವ ಚೌಬಾರಾ ಪಾಂಡುರಂಗ ಮಂದಿರ ಸಮೀಪದ ಮತಗಟ್ಟೆಯಲ್ಲಿ ಮಂಗಳವಾರ ಮತದಾರರು ಅಂತರ ಕಾಯ್ದುಕೊಂಡು ನಿಂತಿದ್ದರು / ಚಿತ್ರ: ಗುರು‍ಪಾದಪ್ಪ ಸಿರ್ಸಿ
ಬೀದರ್‌ನ ವಾರ್ಡ್ ಸಂಖ್ಯೆ 2ರಲ್ಲಿರುವ ಚೌಬಾರಾ ಪಾಂಡುರಂಗ ಮಂದಿರ ಸಮೀಪದ ಮತಗಟ್ಟೆಯಲ್ಲಿ ಮಂಗಳವಾರ ಮತದಾರರು ಅಂತರ ಕಾಯ್ದುಕೊಂಡು ನಿಂತಿದ್ದರು / ಚಿತ್ರ: ಗುರು‍ಪಾದಪ್ಪ ಸಿರ್ಸಿ   

ಬೀದರ್: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಕುಂಬಾರವಾಡ, ಓಲ್ಡ್‌ಸಿಟಿ, ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿ, ಮೈಲೂರ್‌ನಲ್ಲಿರುವ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆ ಬಿರುಸಿನ ಮತದಾನ ಮಾಡಿದರು. ಓಲ್ಡ್‌ಸಿಟಿಯಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ರಮ್ಜಾನ್‌ ಪ್ರಯುಕ್ತ ಹಲವರು ಉಪವಾಸ ವ್ರತದಲ್ಲಿದ್ದಾರೆ. ಹೀಗಾಗಿ ಮುಸ್ಲಿಮರು ಹೆಚ್ಚು ವಾಸವಾಗಿರುವ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಬಿಸಿಲು ಹಾಗೂ ಸೆಕೆ ಅಧಿಕ ಇರುವ ಕಾರಣ ಮಧ್ಯಾಹ್ನ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು.

ADVERTISEMENT

ಮತಗಟ್ಟೆ ಸಿಬ್ಬಂದಿ ಹ್ಯಾಂಡ್‌ಗ್ಲೌಸ್ ಹಾಗೂ ಮಾಸ್ಕ್‌ ಹಾಕಿಕೊಂಡಿದ್ದರು. ಮತದಾರರು ಮತಗಟ್ಟೆಗಳ ಮುಂದೆ ಹಾಕಲಾಗಿದ್ದ ಮಾರ್ಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಆಶಾ ಕಾರ್ಯಕರ್ತೆಯರು ಮತಗಟ್ಟೆಗಳಲ್ಲಿ ಮತದಾರರು ಪ್ರವೇಶಿಸುವ ಮೊದಲು ಅವರ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸುತ್ತಿದ್ದರು. ಮಾಸ್ಕ್‌ ಧರಿಸದವರಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಬರುವಂತೆ ಸೂಚಿಸಲಾಯಿತು.

ಮತಯಂತ್ರ ಇಟ್ಟಿರುವ ಕೊಠಡಿಯಲ್ಲಿ ಕನಿಷ್ಠ ಉಷ್ಣಾಂಶ ಕಾಯ್ದುಕೊಳ್ಳಲು ಕೆಲವು ಫ್ಯಾನ್‌ಗಳನ್ನು ಇಡಲಾಗಿತ್ತು. ಮತದಾರರ ಹಿತದೃಷ್ಟಿಯಿಂದ ಮತಗಟ್ಟೆ ಆವರಣದಲ್ಲಿ ಪೆಂಡಾಲ್‌ ಹಾಕಲಾಗಿತ್ತು. ಅಂತರ ಕಾಯ್ದುಕೊಳ್ಳದವರು ಹಾಗೂ ಸರತಿ ಸಾಲಿನಲ್ಲಿ ನಿಲ್ಲದವರಿಗೆ ಪೊಲೀಸ್‌ ಸಿಬ್ಬಂದಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ಒಟ್ಟಾರೆ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು.

ಮತದಾರರ ಸುರಕ್ಷತೆ ಹಾಗೂ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಮತದಾನವನ್ನು ಹೆಚ್ಚುವರಿ ಒಂದು ಗಂಟೆ ವಿಸ್ತರಿಸಲಾಗಿತ್ತು. ಬೆಳಿಗ್ಗೆ ಮತಗಟ್ಟೆಗೆ ಬರಲು ಸಾಧ್ಯವಾಗದವರು ಸಂಜೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.