ADVERTISEMENT

ಅಧಿಕಾರಿಗಳಿಂದ ಕೊಲೆ ಬೆದರಿಕೆ: ಆರೋಪ

ಚಾಂಬೋಳ ಪಿಡಿಒ ಮಾಡಿದ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 18:48 IST
Last Updated 26 ನವೆಂಬರ್ 2020, 18:48 IST

ಬೀದರ್‌: ‘ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಅಧಿಕಾರಿಗಳು ಭ್ರಷ್ಟರೊಂದಿಗೆ ಶಾಮೀಲಾಗಿ ನನ್ನ ಕೊಲೆಗೆ ಯತ್ನಿಸುತ್ತಿದ್ದಾರೆ’ ಎಂದು ಹೇಳಿಕೆ ನೀಡಿರುವ ಬೀದರ್‌ ತಾಲ್ಲೂಕಿನ ಚಾಂಬೋಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾ ಕಾಂಬಳೆ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು, ಪೊಲೀಸರು ಮತ್ತು ಚುನಾಯಿತ ಪ್ರತಿನಿಧಿಗಳು ಸೇರಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ. ಎರಡು ತಿಂಗಳ ಹಿಂದೆ ಭೂಗತ ಪಾತಕಿಗಳ ಮೂಲಕ ನನ್ನನ್ನು ಕೊಲೆ ಮಾಡಿಸುವ ಪ್ರಯತ್ನ ನಡೆದಿದೆ. ಈಗ ಸರ್ಕಾರಕ್ಕೆ ಮನವಿ ಕೊಡಲು ಬೆಂಗಳೂರಿಗೆ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ನಾನು ಸೇವೆಗೆ ಸೇರಿದಾಗಿನಿಂದ ಕೊಲೆಗೆ ಯತ್ನ ನಡೆದಿದೆ. ಕೆಲ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಾಮಾಣಿಕ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಹೊರೆಸಿ, ಕೆಲ ಪ್ರಕರಣಗಳಲ್ಲಿ ಸಿಲುಕಿಸಿ ಕೊಲೆ ಮಾಡುವ ಪ್ರಯತ್ನ ನಡೆದಿವೆ. ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಲೂಟಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಮೇಲಾಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕಿರುಕುಳ ಕೊಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

‘ನಾನು ಬೆಂಗಳೂರಿನ ಹೋಟೆಲ್‌ನಲ್ಲಿ ಇದ್ದೆ. ಗುಂಡಾಗಳು ಇಲ್ಲಿಯೂ ನನ್ನ ಮೇಲೆ ದಾಳಿಗೆ ಪ್ರಯತ್ನಿಸಿದ್ದಾರೆ. ಹೀಗಾಗಿ
ನಾನು ಬೆಂಗಳೂರಿನಲ್ಲೇ ಪರಿಚಯಸ್ಥರ ಮನೆಯೊಬ್ಬರಲ್ಲಿ ಆಶ್ರಯ ಪಡೆದಿದ್ದೇನೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ನನಗೆ ರಕ್ಷಣೆ ಸಿಗುತ್ತಿಲ್ಲ’ ಎಂದು ಅವರು ದೂರಿದ್ದಾರೆ.

‘ಜನರ ಪರ ಕೆಲಸ ಮಾಡಿದ್ದೇನೆ. ತೆರಿಗೆ ಹಣ ಜನರಿಗೆ ಮುಟ್ಟುವಂತೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇನೆ. 80 ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇನೆ. ಒಂದು ವಾರದಿಂದ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ಅದರೆ ಅವರು ಅಪಾಯಂಟ್‌ಮೆಂಟ್‌ ಕೊಡುತ್ತಿಲ್ಲ. ಅವರನ್ನು ಭೇಟಿ ಮಾಡುವ ಪ್ರಯತ್ನ ಮುಂದುವರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಪೊಲೀಸ್‌ ಠಾಣೆಯ ಹಿಂಬದಿಯಲ್ಲೇ ನನ್ನ ಮನೆ ಇದೆ. ಪೊಲೀಸರಿಂದಲೂ ನನಗೆ ರಕ್ಷಣೆ ಇಲ್ಲ. ಸುಳ್ಳು ಆರೋಪ ಮಾಡಿ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಭ್ರಷ್ಟರೆಲ್ಲ ಸೇರಿಕೊಂಡು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಭೇಟಿ ಸಾಧ್ಯವಾಗದಿದ್ದರೆ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಒಂದು ವಾರದ ನಂತರ ಪ್ರತಿಭಟನೆ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಕೊಲೆಯ ಸಂಚಿಗೆ ಚುನಾಯಿತ ಪ್ರತಿನಿಧಿಗಳನ್ನೇ ನೈತಿಕ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ನಾಲ್ಕು ತಿಂಗಳಿಂದ ದೂರು ಕೊಡುತ್ತಿದ್ದೇನೆ. ಯಾರೂ ಸ್ಪಂದಿಸುತ್ತಿಲ್ಲ. ಭ್ರಷ್ಟರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಮಾಫಿಯಾಗಳಿಗೆ ಹೆದರಿ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.