ADVERTISEMENT

ಮೈಸೂರು ದಸರಾ: ‘ಬೀದರ್ ಕೋಟೆ’ ಸ್ತಬ್ಧಚಿತ್ರಕ್ಕೆ ಬಹುಮಾನ

ಮಾಣಿಕ ಆರ್ ಭುರೆ
Published 7 ಅಕ್ಟೋಬರ್ 2025, 4:36 IST
Last Updated 7 ಅಕ್ಟೋಬರ್ 2025, 4:36 IST
<div class="paragraphs"><p>ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೀದರ್ ಕೋಟೆಯ ಸ್ತಬ್ಧಚಿತ್ರ</p></div>

ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೀದರ್ ಕೋಟೆಯ ಸ್ತಬ್ಧಚಿತ್ರ

   

ಬಸವಕಲ್ಯಾಣ: ‘ವಿಶ್ವ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ‘ಬೀದರ್ ಕೋಟೆ’ಯ ಸ್ತಬ್ಧಚಿತ್ರವು ಎಲ್ಲರ ಗಮನಸೆಳೆದಿದ್ದು, ಕಲಬುರಗಿ ವಿಭಾಗ ಮಟ್ಟದಲ್ಲಿ ಪ್ರಥಮ ಬಹುಮಾನ ದೊರೆತಿದೆ. ಸ್ತಬ್ಧಚಿತ್ರವನ್ನು ಬಸವಕಲ್ಯಾಣದ ಕಲಾವಿದರು ಸಿದ್ಧಪಡಿಸಿದ್ದರು ಎಂಬುದು ಹೆಮ್ಮೆಯ ಸಂಗತಿ.

ತೆರೆದ ವಾಹನದ ಮೇಲೆ ಮುಂಭಾಗದಲ್ಲಿ ಕೋಟೆಯ ಮಹಾದ್ವಾರ, ರಂಗೀನ್ ಮಹಲ್, ಮುಹಮ್ಮದ್ ಗವಾನ್ ಮದರಸಾ, ಗಗನ ಮಹಲ್, ಮಸೀದಿ ಹಾಗೂ ಇತರೆ ಕಟ್ಟಡಗಳ ಮಾದರಿಗಳನ್ನು ನಿರ್ಮಿಸಲಾಗಿತ್ತು. ನೋಡುಗರು ಬೀದರ್‌ನಲ್ಲಿ ಇಂಥದ್ದೊಂದು ಚೆಂದದ ಕೋಟೆ ಇದೆಯೇ ಎಂದು ಹುಬ್ಬೇರಿಸುವಂತಿತ್ತು.

ADVERTISEMENT

ಬೀದರ್ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದ, ಕೋಟೆಯ ಮಾದರಿ ಅಂದಿನ ಗತವೈಭವ ಸಾರುವಂತಿತ್ತು. ನಾಲ್ಕು ಮೂಲೆಗಳಲ್ಲಿ ಮತ್ತು ಎಡ, ಬಲ ಭಾಗ ಒಳಗೊಂಡು 6 ಸ್ಥಳಗಳಲ್ಲಿ ಇಟ್ಟಿದ್ದ ಕಲಾಕೃತಿಗಳು ಬೀದರ್ ನಗರದ ಪ್ರಸಿದ್ಧ ಬಿದರಿ ಕಲೆಯ ಸೊಬಗನ್ನು ಸಾರಿದವು. ಈ ಕಾರಣಕ್ಕಾಗಿ ಮೈಸೂರು ದಸರಾ ಜಂಬೂ ಸವಾರಿ ಉಪ ಸಮಿತಿಯವರು ಐದು ವಿಭಾಗವಾರು ಘೋಷಿಸಿದ ಪ್ರಶಸ್ತಿಯಲ್ಲಿ ವಿಭಾಗ ಮಟ್ಟದಲ್ಲಿ ಇದಕ್ಕೆ ಪ್ರಥಮ ಸ್ಥಾನ ನೀಡಿದ್ದಾರೆ.

ನಗರದ ಕಲಾವಿದ ಶಿವಕುಮಾರ ಕಟಗಿಮಠ ನೇತೃತ್ವದಲ್ಲಿ 14 ದಿನಗಳಿಂದ ಸತತವಾಗಿ ಶ್ರಮಿಸಿ ಈ ಸ್ತಬ್ಧಚಿತ್ರ ರೂಪಿಸಲಾಗಿದೆ. ಇನ್ನುಳಿದ ಕಲಾವಿದರು ಸಹ ಇಲ್ಲಿನವರೇ ಆಗಿದ್ದಾರೆ.

‘ನಮ್ಮ ಕಲಾವಿದರ ತಂಡ ಅನೇಕ ವರ್ಷಗಳಿಂದ ಮೈಸೂರು ದಸರಾ, ಗಣೇಶ ಉತ್ಸವ ಹಾಗೂ ಇತರೆ ಉತ್ಸವಗಳಲ್ಲಿನ ಸ್ತಬ್ಧಚಿತ್ರಗಳನ್ನು ನಿರ್ಮಿಸುತ್ತಿದೆ. ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನದ ಸಭಾಮಂಟಪದ ಕೋಟೆ ಮಾದರಿಯ ಆಕರ್ಷಕ ಮಹಾದ್ವಾರ ಸಹ ನಿರ್ಮಿಸಿದ್ದೇವು’ ಎಂದು ಶಿವಕುಮಾರ ಕಟಗಿಮಠ ತಿಳಿಸಿದ್ದಾರೆ.

ಮೈಸೂರು ದಸರಾ ಮೆರವಣಿಗೆಯಲ್ಲಿನ ಬೀದರ್ ಕೋಟೆಯ ಸ್ತಬ್ಧಚಿತ್ರ ಸಿದ್ಧಪಡಿಸಿದ ಕಲಾವಿದರ ತಂಡ
ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೀದರ್ ಕೋಟೆಯ ಸ್ತಬ್ಧಚಿತ್ರ
ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕೆಐಆರ್‌ಡಿಬಿ ಅಧಿಕಾರಿಗಳ ಸಹಕಾರದಿಂದ ₹8.50 ಲಕ್ಷ ವೆಚ್ಚದಲ್ಲಿ ಎರಡು ವಾರಗಳ ಅವಧಿಯಲ್ಲಿ ಸ್ತಬ್ಧಚಿತ್ರ ನಿರ್ಮಿಸಲಾಯಿತು
ಶಿವಕುಮಾರ ಕಟಗಿಮಠ ಕಲಾವಿದ

ಕಲಾವಿದರ ತಂಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ನಿರ್ದೇಶನದಲ್ಲಿ ಸ್ತಬ್ಧಚಿತ್ರ ಸಿದ್ಧಪಡಿಸಲಾಗಿದೆ. ಶಿವಕುಮಾರ ಕಟಗಿಮಠ ಸಂಜೀವಕುಮಾರ ಮೇತ್ರೆ ಗೋರಟಾ ಸಂಗಮೇಶ ಶೀಲವಂತ ವಾಸೀಮ್ ಸೈಯದ್ ಗೌಸ್ ಸೈಯದ್ ರಮೇಶ ಜಮಾದಾರ ಶರಣಯ್ಯ ಮಠಪತಿ ಸಂಗಮೇಶ ಬಿರಾದಾರ ಕಬೀರದಾಸ್ ಕಲಬುರಗಿಕರ್ ಅಶೋಕ ಕ್ಷೀರಸಾಗರ ಮಹಾದೇವ ಇಟಗಾ ಈ ಕಲಾವಿದರು ಇದನ್ನು ಸುಂದರವಾಗಿ ನಿರ್ಮಿಸಿದ್ದಾರೆ. ನೋಡಲ್ ಅಧಿಕಾರಿಯಾಗಿ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಕಾಶ ಸೂರ್ಯವಂಶಿ ಸಹಾಯ ನೋಡಲ್ ಅಧಿಕಾರಿಯಾಗಿ ಶಂಕರರೆಡ್ಡಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.