ಜನವಾಡ: ಬೀದರ್- ಮಾಳೆಗಾಂವ್ ರಸ್ತೆಯಲ್ಲಿ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಸಮೀಪ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕಿರಿದಾಗಿರುವ ಕಾರಣ ಮಳೆಗಾಲದಲ್ಲಿ ಆಗಾಗ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.
ಬೀದರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ಮಳೆಯಾದಾಗ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಅಂತಹ ವೇಳೆ ಸೇತುವೆ ಮೇಲಿಂದ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.
ಸೇತುವೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹಾಗೂ ಅದರ ಎತ್ತರ ಕಡಿಮೆ ಆಗಿರುವುದರಿಂದ ಅಧಿಕ ಮಳೆಯಾದಾಗಲೆಲ್ಲ ಸೇತುವೆ ಮುಳುಗಡೆ ಆತಂಕ ವಾಹನ ಸವಾರರನ್ನು ಕಾಡುತ್ತಿರುತ್ತದೆ. ಸಮಸ್ಯೆ ಹಲವು ವರ್ಷಗಳಿಂದ ಇದ್ದರೂ, ಆಡಳಿತದಿಂದ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಿಲ್ಲ.
ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ತೆಲಂಗಾಣದ ಗ್ರಾಮಗಳಿಗೆ ತೆರಳುವವರಿಗೂ ಅನುಕೂಲಕರ ರಸ್ತೆಯಾಗಿದೆ.
‘ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದಾಗ ಸೇತುವೆ ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತವಾಗುತ್ತದೆ. ಕೆಲವೊಮ್ಮೆ ಮೂರು- ನಾಲ್ಕು ತಾಸುಗಳವರೆಗೂ ನೀರಿನ ಮಟ್ಟ ಕಡಿಮೆಯಾಗುವುದಿಲ್ಲ. ಆಗ ವಾಹನ ಸವಾರರು ಸಂಚಾರಕ್ಕೆ ಬದಲಿ ಮಾರ್ಗ ಅನುಸರಿಸುವುದು ಅನಿವಾರ್ಯವಾಗುತ್ತದೆ’ ಎಂದು ಹೇಳುತ್ತಾರೆ ಗುಮ್ಮಾ ಗ್ರಾಮದ ಪುಂಡಲೀಕರಾವ್ ಪಾಟೀಲ.
‘ಮಾಳೆಗಾಂವ್, ಕಾಪಲಾಪುರ, ಅಮದಲಪಡ್, ಚಿಲ್ಲರ್ಗಿ, ತೆಲಂಗಾಣದ ಶಹಾಪುರ, ಮೋರಗಿ, ನಾಗಲಗಿದ್ದಿ, ದಾಮರಗಿದ್ದಿ, ನಾರಾಯಣಖೇಡ್, ಅತಮೇಲ್, ತೋರಣ, ಗುಡೂರು ಗ್ರಾಮಗಳ ಜನ ಬೀದರ್‍ಗೆ ಬರಲು ಹಾಗೂ ತಮ್ಮ ಊರುಗಳಿಗೆ ಮರಳಲು ಇದೇ ರಸ್ತೆ ಬಳಸುತ್ತಾರೆ. ಪ್ರಯಾಣದ ಅಂತರ ಕಡಿಮೆಯಾಗುವುದು ಕೂಡ ಈ ಮಾರ್ಗ ಅಧಿಕ ಬಳಕೆಗೆ ಕಾರಣವಾಗಿದೆ’ ಎಂದು ತಿಳಿಸುತ್ತಾರೆ.
‘ಹಳ್ಳ ದೊಡ್ಡದಿದೆ. ಸೇತುವೆ ಸಣ್ಣದಾಗಿದೆ. ಹೀಗಾಗಿ ಬೀದರ್, ಮಲ್ಕಾಪುರ, ಅಷ್ಟೂರ ಪ್ರದೇಶದಲ್ಲಿ ಭಾರಿ ಮಳೆಯಾದರೆ ಮುಳುಗಡೆಯಾಗುತ್ತದೆ’ ಎಂದು ಹೇಳುತ್ತಾರೆ.
‘ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯಲ್ಲಿ ತಗ್ಗುಗಳು ಬಿದ್ದಿವೆ. ಮೊದಲಿನ ಸಾಮರ್ಥ್ಯವೂ ಉಳಿದಿಲ್ಲ. ಪ್ರಯಾಣಿಕರ ಸುರಕ್ಷತೆ ಹಾಗೂ ಎಲ್ಲ ಕಾಲದಲ್ಲೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಎತ್ತರದ ಹೊಸ ಸೇತುವೆ ನಿರ್ಮಿಸಬೇಕು’ ಎಂದು ನಾಗರಿಕರು ಒತ್ತಾಯಿಸುತ್ತಾರೆ.
ಗುಮ್ಮಾ ಸಮೀಪದ ಸೇತುವೆ ಎತ್ತರ ಹೆಚ್ಚಿಸಿದರೆ ವಿವಿಧ ಗ್ರಾಮಗಳ ಜನರಿಗೆ ಮಳೆಗಾಲದಲ್ಲಿ ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಣೆಯಾಗುತ್ತದೆಪುಂಡಲೀಕರಾವ್ ಪಾಟೀಲ, ಗುಮ್ಮಾ ಗ್ರಾಮಸ್ಥ
₹2.5 ಕೋಟಿ ವೆಚ್ಚದಲ್ಲಿ ಗುಮ್ಮಾ ಸಮೀಪದ ಸೇತುವೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.ಭಗವಾನ್ ಸಿಂಗ್, ಪಿಡಬ್ಲ್ಯೂಡಿ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.