ADVERTISEMENT

‘ಪ್ರಜಾಪ್ರಭುತ್ವ ಉಳಿವಿಗೆ ಮತದಾನ ಮಾಡಿ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 7:27 IST
Last Updated 26 ಜನವರಿ 2024, 7:27 IST
ಬೀದರ್‌ನಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಉದ್ಘಾಟಿಸಿದರು
ಬೀದರ್‌ನಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಉದ್ಘಾಟಿಸಿದರು   

ಬೀದರ್‌: ‘ಪ್ರಜಾಪ್ರಭುತ್ವ ಉಳಿಸಿಕೊಂಡು ಹೋಗಬೇಕಾದರೆ ಅರ್ಹ ಮತದಾರರೆಲ್ಲರೂ ಮತದಾನ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಕೆಲವು ದೇಶಗಳಲ್ಲಿ ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. 2011ರಲ್ಲಿ ದಕ್ಷಿಣ ಸುಡಾನ್ ಹೊಸ ದೇಶವಾಗಿ ಉದಯವಾದಾಗ ಅಲ್ಲಿನ ಶಾಂತಿ ಪಾಲನಾ ಪಡೆಯಲ್ಲಿ ನಾನು ಕೆಲಸ ಮಾಡಿದ್ದೆ. ಆ ದೇಶದಲ್ಲಿ ಸರ್ಕಾರಿ ಶಾಲೆಗಳಿಲ್ಲ. ಇತ್ತೀಚೆಗೆ ಒಂದೆರೆಡು ಕಡೆ ಆರಂಭಗೊಂಡಿವೆ. ಅಲ್ಲಿನ ಮಕ್ಕಳು ಬೀದಿ ಬದಿ ದೀಪದಲ್ಲಿ ಕುಳಿತು ಓದುವ ಪರಿಸ್ಥಿತಿ ಇದೆ. ಭಾರತ ದೇಶವಾಸಿಗಳು ನಾವು ಬಹಳ ಸುದೈವಿಗಳು ಎಂದರು.

ADVERTISEMENT

ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಶೇಕಡಾ ನೂರಕ್ಕೆ ನೂರರಷ್ಟು ಹಕ್ಕು ಚಲಾಯಿಸಬೇಕು. ಪ್ರತಿ ಚುನಾವಣೆಯಲ್ಲಿ ಶೇ 60ರಿಂದ 70ರಷ್ಟು ಮತದಾನವಾಗುತ್ತಿದೆ. 18 ವರ್ಷ ಮೇಲಿನ ಎಲ್ಲ ಅರ್ಹರೂ ಮತದಾನ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, 1950ರಲ್ಲಿ ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂತು. ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತದೆ. ಜಗತ್ತಿನ 193 ದೇಶಗಳಲ್ಲಿ ಭಾರತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಯುವ ಮತದಾರರು ತಮ್ಮ ಹೆಸರನ್ನು ಸೇರಿಸಬೇಕು. ಈ ಮಾಹಿತಿಯನ್ನು ತಮ್ಮ ಮಿತ್ರರಿಗೂ ತಿಳಿಸಬೇಕು. ಮತ ಹಾಕಿದರೆ ಮಾತ್ರ ನಮಗೆ ಕೇಳುವ ಹಕ್ಕು ಇರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಬದೋಲೆ ಮಾತನಾಡಿ, ಬರುವ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣಾ ಬರುತ್ತಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ನೆರೆಹೊರೆಯವರಿಗೂ ತಿಳಿಸಬೇಕು. ಅಬ್ರಾಹಂ ಲಿಂಕನ್ ಹೇಳಿದಂತೆ ‘ಬುಲೆಟ್‌ಗಿಂತ ಬ್ಯಾಲೆಟ್ ಬಲಿಷ್ಠವಾಗಿದ್ದು’ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

ಅತ್ಯುತ್ತಮ ಬಿಎಲ್‌ಒಗಳು, ಉತ್ತಮ ಮತದಾರರ ಸಂಘ ಸ್ಥಾಪಿಸಿದವರಿಗೆ, ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕಾರ‍್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಸನ್ಮಾನಿಸಲಾಯಿತು.

ಯುವ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಿಸಲಾಯಿತು. ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ರಂಗಮಂದಿರದವರೆಗೆ ಜಾಥಾ ನಡೆಯಿತು. ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ತಹಶೀಲ್ದಾರ್‌ ದಿಲ್‌ಶದ್‌ ಮೆಹತ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್, ಚುನಾವಣಾ ತಹಶೀಲ್ದಾರ್‌ ಗೋಪಾಲ ಕಪೂರ್ ಹಾಜರಿದ್ದರು.

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.