
ಔರಾದ್: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಕ್ಕಳಲ್ಲಿ ಹೆಚ್ಚುತ್ತಿದ್ದು, ನೈಜ ಜೀವನದ ಅನುಭವಗಳಿಂದ ಅವರು ದೂರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಯನಗುಂದಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮಂಗಳವಾರ ವಿದ್ಯಾರ್ಥಿಗಳಿಗೆ ನಿಸರ್ಗದ ಮಡಿಲಲ್ಲಿ ಹೊಸ ಮಾದರಿ ಕಲಿಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪಠ್ಯ ಪುಸ್ತಕದ ಅಕ್ಷರಗಳಷ್ಟೇ ಜೀವನವಲ್ಲ, ನಿಸರ್ಗವೇ ನಿಜವಾದ ಪಾಠಶಾಲೆ ಎಂಬ ನಿಲುವಿನಡಿ ಆಯೋಜಿಸಲಾದ ನಿಸರ್ಗ ನಡಿಗೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಈ ವರ್ಷ ಸುರಿದ ಭಾರಿ ಮಳೆಯಿಂದ ಪ್ರಕೃತಿ ಸೊಬಗು ಮತ್ತಷ್ಟು ಹೆಚ್ಚಿಸಿದ್ದು ವಿದ್ಯಾರ್ಥಿಗಳು ತಮ್ಮ ಶಾಲೆ ಹಿಂದಿನ ಭಾಗದ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಕಾಲ ಕಳೆದು ಸಂಭ್ರಮಿಸಿದರು.
ತತ್ವಜ್ಞಾನಿ ಜೀನ್ ಜಾಕ್ ರೂಸೋ ನೀಡಿದ ಮರಳಿ ನಿಸರ್ಗಕ್ಕೆ ಎನ್ನುವ ಸಂದೇಶದ ಅನ್ವಯ ನಿಸರ್ಗ ಸಂಬಂಧಿತ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕ ಬಸವರಾಜ ಮಠಪತಿ ವಿದ್ಯಾರ್ಥಿಗಳ ನಿಸರ್ಗದ ನಡಿಗೆ ಬಗ್ಗೆ ಮಾಹಿತಿ ನೀಡಿದರು.
ನಿಸರ್ಗದಲ್ಲಿ ನಡೆದಾಡುವುದರಿಂದ ಮಕ್ಕಳಲ್ಲಿ ಮಾನಸಿಕ ಶಾಂತಿ, ದೈಹಿಕ ಚುರುಕು ಹಾಗೂ ವೀಕ್ಷಣಾಶಕ್ತಿ ವೃದ್ಧಿಯಾಗುತ್ತದೆ. ನಿಸರ್ಗದ ಮಧ್ಯೆ ಸಿಗುವ ಪರಿಶುದ್ಧ ಗಾಳಿ, ಪಕ್ಷಿಗಳು, ಸಸ್ಯಗಳು ಮತ್ತು ಹೊಲಗಳ ದೃಶ್ಯಗಳು ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಹೆಚ್ಚಿಸುತ್ತವೆ ಎಂದು ಶಿಕ್ಷಕ ಲಕ್ಷ್ಮರಡ್ಡಿ ಗಂಗಾಪೂರೆ ತಿಳಿಸಿದರು.
‘ನಮ್ಮ ಶಾಲೆಯು ಪಾಠದ ಜೊತೆಗೆ ಪಥಸಂಚಲನ, ವನಭೋಜನ, ಮಡ್‌ಬಾತ್, ಪರಿಸರ ಜಾಗೃತಿ ಹಾಗೂ ಸ್ವಚ್ಛ ಭಾರತ ಮಿಷನ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತಿದೆ’ ಎಂದರು.
‘ನಮ್ಮ ಗುರುಗಳು ನಮಗೆ ನಿಸರ್ಗದ ಮಧ್ಯೆ ಕಲಿಸಲು ಕರೆದುಕೊಂಡು ಹೋಗಿದ್ದು ಅತ್ಯಂತ ಆನಂದದ ಕ್ಷಣವಾಗಿತ್ತು. ಪುಸ್ತಕದಲ್ಲಿರುವ ವಿಷಯಗಳನ್ನು ನೇರ ಅನುಭವದಿಂದ ಕಲಿಯುವ ಅವಕಾಶ ಸಿಕ್ಕಿತು’ ಎಂದು ವಿದ್ಯಾರ್ಥಿ ಅರ್ಪಿತ ಈಶ್ವರ್ ತಮ್ಮ ಭಾವನೆ ಹಂಚಿಕೊಂಡರು.
ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಎಂ.ಡಿ. ಸಿರಾಜ್, ಮುಸ್ತಫಾ ಆಜಾದ್, ಖುರಮ್ ಮುರ್ತುಜಾ, ತೇಜಸ್ವಿ ಚಾಂದಕವಠೆ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.