
ಬೀದರ್: ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ’ ಎಂದು ನೀಟ್ ಸಂಯೋಜಕ ಮಲ್ಲಿನಾಥ ಮಠಪತಿ ತಿಳಿಸಿದರು.
ಈ ಸಲ ಹೊಸದಾಗಿ ಶಾಹೀನ್ ಪಿಯು ಕಾಲೇಜು ಪರೀಕ್ಷಾ ಕೇಂದ್ರವಾಗಿ ಆಯ್ಕೆಯಾಗಿದೆ. ನೋಡಲ್ ಕೇಂದ್ರವಾಗಿಯೂ ಗುರುತಿಸಲಾಗಿದೆ. ಬೀದರ್ ನಗರದ 12, ಭಾಲ್ಕಿ ತಾಲ್ಲೂಕಿನ ಕರಡ್ಯಾಳ ಹಾಗೂ ಹುಮನಾಬಾದಿನ ತಲಾ ಒಂದು ಕೇಂದ್ರ ಸೇರಿದಂತೆ ಒಟ್ಟು 14 ಕೇಂದ್ರಗಳಲ್ಲಿ ಒಟ್ಟು 8,289 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
‘ರಾಷ್ಟ್ರಮಟ್ಟದಲ್ಲಿ ಒಟ್ಟು 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ 1.54 ಲಕ್ಷ ಮಕ್ಕಳು ಪರೀಕ್ಷೆ ಬರೆಯುವರು. ಮೇ 5ರಂದು ಮಧ್ಯಾಹ್ನ 2ರಿಂದ ಸಂಜೆ 5.20ರವರೆಗೆ ನಾಲ್ಕು ವಿಷಯಗಳ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಬೆಳಿಗ್ಗೆ 11ರ ನಂತರ ಪರೀಕ್ಷಾ ಕೇಂದ್ರಗಳಿಗೆ ಹೋಗಬಹುದು. ಹಿಂದಿನ ದಿನ ಪಾಲಕರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿಕೊಳ್ಳುವುದು ಸೂಕ್ತ. ಪರೀಕ್ಷಾ ದಿನ ಯಾವುದೇ ರೀತಿಯ ಗೊಂದಲ ಉಂಟಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಹೋಗಿ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.