ಬೀದರ್: ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಪರಿಚಯಿಸಿರುವ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದ ಬಸವ ಭಕ್ತರ ಬಹು ದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನವರಿ 6 ರಂದು ಮಧ್ಯಾಹ್ನ 12ಕ್ಕೆ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಬೀದರ್‌ನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.
ರಾಜ್ಯ ಸರ್ಕಾರ ನೂತನ ಅನುಭವ ಮಂಟಪಕ್ಕೆ ₹ 500 ಕೋಟಿ ಘೋಷಿಸಿದ್ದು, ಈಗಾಗಲೇ ₹ 150 ಕೋಟಿ ಬಿಡುಗಡೆಯನ್ನೂ ಮಾಡಿದೆ. ಇದೀಗ ಮಂಟಪ ನಿರ್ಮಾಣಕ್ಕೆ ಚಾಲನೆ ಕೂಡ ದೊರೆಯುತ್ತಿರುವುದು ಬಸವ ಭಕ್ತರಲ್ಲಿ ಹರ್ಷ ಮೂಡಿಸಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋ.ರು. ಚನ್ನಬಸಪ್ಪ ಅವರ ನೇತೃತ್ವದ ಸಮಿತಿಯು ₹ 650 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿತ್ತು. ಸರ್ಕಾರ ₹ 500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ಅನುಭವ ಮಂಟಪದ ಜತೆಗೆ ಬಸವಕಲ್ಯಾಣ ಹಾಗೂ ಬೀದರ್‍ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅವರಿಗೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಡಿಕೆ ಮಂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ ಒಂದಾಗಿಸಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಜ. 6 ರಂದು ಭೂಮಿ ಪೂಜೆ ನೆರವೇರಿಸುತ್ತಿರುವುದು ನಾಡಿನ ಬಸವ ಭಕ್ತರಲ್ಲಿ ಅತೀವ ಸಂತಸ ಉಂಟು ಮಾಡಿದೆ. ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆಯನ್ನು ಕೊಟ್ಟಿದ್ದೇ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನದ ಯಾವುದೇ ಮಿತಿ ಹಾಕದೆ ವಿಶ್ವದ ಅದ್ಭುತಗಳಲ್ಲಿ ಒಂದಾಗಿಸುವ ರೀತಿಯಲ್ಲಿ ನೂತನ ಅನುಭವ ಮಂಟಪ ನಿರ್ಮಿಸಬೇಕು.
-ಬಸವರಾಜ ಧನ್ನೂರ,ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ
***
ಭೂಮಿ ಪೂಜೆಗೆ ಸ್ವಾಗತ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದನ್ನು ಸ್ವಾಗತಿಸಲಾಗುವುದು. ಈ ಕೆಲಸ ಹಿಂದೆಯೇ ಆಗಬೇಕಿತ್ತು. ಈಗಲಾದರೂ ಆಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಅನುಭವ ಮಂಟಪ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಪ್ರಧಾನಿ ಅವರಿಂದ ಉದ್ಘಾಟನೆ ಮಾಡಿಸಬೇಕು.
-ಬಸವಲಿಂಗ ಪಟ್ಟದ್ದೇವರು,ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.