ADVERTISEMENT

ಬೀದರ್‌: ಸಡಗರ, ಸಂಭ್ರಮದಿಂದ ಹೊಸ ವರ್ಷಾಚರಣೆ

ತಡರಾತ್ರಿ ವರೆಗೆ ಸಂಭ್ರಮಾಚರಣೆ; ನೀರಿನಂತೆ ಹರಿದ ಮದ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:16 IST
Last Updated 1 ಜನವರಿ 2024, 16:16 IST
ಹೊಸ ವರ್ಷಾಚರಣೆಯ ಮೊದಲ ದಿನವಾದ ಸೋಮವಾರ ಬೀದರ್‌ನ ಪಾಪನಾಶ ದೇವಸ್ಥಾನದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು
ಹೊಸ ವರ್ಷಾಚರಣೆಯ ಮೊದಲ ದಿನವಾದ ಸೋಮವಾರ ಬೀದರ್‌ನ ಪಾಪನಾಶ ದೇವಸ್ಥಾನದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು   

ಬೀದರ್‌: ಸಡಗರ, ಸಂಭ್ರಮದ ನಡುವೆ 2024ನೇ ಹೊಸ ವರ್ಷಕ್ಕೆ ಭಾನುವಾರ ಮಧ್ಯರಾತ್ರಿ ಜಿಲ್ಲೆಯಲ್ಲಿ ಸ್ವಾಗತಿಸಲಾಯಿತು.

ಮಧ್ಯರಾತ್ರಿ ಸಮಯ 12 ಗಂಟೆ ಆಗುತ್ತಿದ್ದಂತೆ ಮೋಡಗಳಲ್ಲಿ ಬಣ್ಣ ಬಣ್ಣದ ಪಟಾಕಿಗಳ ಚಿತ್ತಾರ ಮೂಡಿತು. ಎಲ್ಲೆಡೆಯಿಂದ ಡಂ, ಡಂ, ಚಟಪಟ ಪಟಾಕಿಗಳ ಸದ್ದು ಹೆಚ್ಚಾಯಿತು. ಮಂಜು ಮತ್ತು ಕತ್ತಲೆಯಿಂದ ಆವರಿಸಿಕೊಂಡಿದ್ದ ಆಕಾಶದಲ್ಲಿ ಬೆಳಕು ಮೂಡಿತು. ಸಂಗೀತದ ಸದ್ದು ಮತ್ತಷ್ಟು ಏರಿತು. ಏರು ದನಿಯಲ್ಲಿ ‘ವೆಲ್‌ ಕಂ ಟು 2024’ ಎಂದು ಜನ ಕೂಗಿ ಸಂಭ್ರಮಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಹಿ ವಿನಿಮಯ ಮಾಡಿಕೊಂಡರು.

ಹೊಸ ವರ್ಷದ ಸಂಭ್ರಮಾಚರಣೆ ತಡರಾತ್ರಿ 1 ಗಂಟೆಯ ವರೆಗೆ ನಡೆಯಿತು. ನಗರದ ಕೆಲವು ಖಾಸಗಿ ಹೋಟೆಲ್‌ಗಳಲ್ಲಿ ಹೊಸ ವರ್ಷಾಚರಣೆಗೆ ಸಂಗೀತ, ವಿಶೇಷ ಭೋಜನ ಕೂಟಗಳ ವ್ಯವಸ್ಥೆ ಮಾಡಲಾಗಿತ್ತು. ಜನ ಅಲ್ಲಿ ಹಣ ಪಾವತಿಸಿ, ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತೆರಳಿ, ಜನರೊಂದಿಗೆ ಹೊಸ ವರ್ಷ ಆಚರಿಸಿದರು. ಡಿಜೆ ಸಂಗೀತಕ್ಕೆ ಮನಬಿಚ್ಚಿ ಕುಣಿದರು.

ADVERTISEMENT

ಇನ್ನು, ಆಯಾ ಬಡಾವಣೆಗಳಲ್ಲಿ ಜನ ಸಣ್ಣ ಸಣ್ಣ ಗುಂಪುಗಳಲ್ಲಿ ಒಂದೆಡೆ ಸೇರಿ, ಕೇಕ್‌ ಕತ್ತರಿಸಿದರು, ಮತ್ತೆ ಕೆಲವರು ತಮ್ಮ ಮನೆಗಳಲ್ಲಿಯೇ ಹೊಸ ವರ್ಷ ಆಚರಿಸಿದರು. ಹೆಚ್ಚಿನ ಥಂಡಿಯಿದ್ದ ಕಾರಣ ಕೆಲವರು ರಾತ್ರಿ ಒಂಬತ್ತರಿಂದ ಹತ್ತು ಗಂಟೆಯ ವೇಳೆಗೆಲ್ಲ ಮನೆಗಳಲ್ಲಿಯೇ ಕೇಕ್‌ ಕತ್ತರಿಸಿ, ಚಿಣ್ಣರಿಗೆ ಸಿಹಿ ತಿನ್ನಿಸಿ, ನಿದ್ರೆಗೆ ಜಾರಿದ್ದರು.

ಹೋಟೆಲ್‌ಗಳು ಮಧ್ಯರಾತ್ರಿ ವರೆಗೆ ಆಹಾರ ಪೂರೈಸಿದವು. ಹೋಂ ಡೆಲಿವರಿಗೂ ಹೆಚ್ಚಿನ ಬೇಡಿಕೆ ಇತ್ತು. ಹೊಸ ವರ್ಷಾಚರಣೆಗೆ ಹೆಚ್ಚಿನ ಬೇಡಿಕೆ ಬರಬಹುದು ಎಂದು ಮೊದಲೇ ಅರಿತಿದ್ದ ಹಲವು ಹೋಟೆಲ್‌ಗಳವರು ಹೆಚ್ಚಿನ ಆಹಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಸಂಜೆಯಿಂದಲೇ ಮದ್ಯದ ಅಂಗಡಿಗಳ ಎದುರು ಜನದಟ್ಟಣೆ ಕಂಡು ಬಂತು. ಸಂಭ್ರಮದಿಂದ ಮದ್ಯ ಖರೀದಿಸಿ, ಸೇವಿಸಿ ಅದರ ಗುಂಗಿನಲ್ಲಿ ಹೊಸ ವರ್ಷ ಆಚರಿಸಿದರು. ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಒಂದು ತಿಂಗಳ ಮದ್ಯ ಭಾನುವಾರ ಒಂದೇ ದಿನ ಬಿಕರಿಯಾಗಿದೆ. ಹೀಗೆ ಹೊಸ ವರ್ಷಾಚರಣೆಯ ನೆಪದಲ್ಲಿ ನೀರಿನಂತೆ ಜನ ಮದ್ಯ ಸೇವಿಸಿದರು.

ಮತ್ತೆ ಕೆಲವರು ದೇವರ ಪೂಜೆ, ವಿಶೇಷ ಪ್ರಾರ್ಥನೆಯೊಂದಿಗೆ ಸರಳವಾಗಿ ಹೊಸ ವರ್ಷ ಆಚರಿಸಿದರು. ಭಾನುವಾರ ರಜಾ ದಿನವಾಗಿದ್ದರಿಂದ ಅನೇಕರು ಮಧ್ಯಾಹ್ನವೇ ಉದ್ಯಾನಗಳಿಗೆ ತೆರಳಿ ಗೆಳೆಯರೊಂದಿಗೆ ಕೇಕ್‌ ಕತ್ತರಿಸಿ ಹೊಸ ವರ್ಷ ಮುಂಚಿತವಾಗಿಯೇ ಆಚರಿಸಿದರು.

ಸಂಜೆಯಿಂದಲೇ ಬೇಕರಿಗಳ ಎದುರು ಜನದಟ್ಟಣೆ ಕಂಡು ಬಂತು. ಬಹುತೇಕ ಬೇಕರಿಗಳವರು ಮಳಿಗೆ ಎದುರು ಟೆಂಟ್‌ಗಳನ್ನು ಅಳವಡಿಸಿ, ಕೇಕ್‌ಗಳನ್ನು ಮಾರಾಟ ಮಾಡಿದರು. ಕಳೆದ ಒಂದು ವಾರದಿಂದ ಹೆಚ್ಚಿನ ಸಿಬ್ಬಂದಿಯ ನೆರವಿನೊಂದಿಗೆ ನೂರಾರು ಕೇಕ್‌ಗಳನ್ನು ತಯಾರಿಸಿದ್ದರು. ಭಾನುವಾರ ಕತ್ತಲಾಗುವ ಮುನ್ನವೇ ಬಹುತೇಕ ಕಡೆಗಳಲ್ಲಿ ಬಿಸಿ ದೋಸೆಗಳಂತೆ ಕೇಕ್‌ಗಳು ಮಾರಾಟವಾಗಿದ್ದವು.

ಕೆಲ ಯುವಕ ಸಂಘಗಳವರು ಬೈಕ್‌ಗಳ ಮೇಲೆ ನಗರದಲ್ಲಿ ಸುತ್ತಾಡಿ ಹೊಸ ವರ್ಷಾಚರಣೆ ಆಚರಿಸಿದರು. ಜಿಲ್ಲೆಯ ಇತರೆ ಕಡೆಗಳಲ್ಲೂ ಇದೇ ರೀತಿಯ ಸಂಭ್ರಮಾಚರಣೆ ನಡೆಯಿತು. ಸಂಜೆಯಿಂದಲೇ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹದ್ದಿನ ಕಣ್ಣು ಇಟ್ಟಿದ್ದರು. ತಡರಾತ್ರಿ ವರೆಗೆ ಗಸ್ತು ತಿರುಗಿದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:

ಹೊಸ ವರ್ಷದ ಮೊದಲ ದಿನವಾದ ಸೋಮವಾರ ನಗರದ ವಿವಿಧ ದೇವಸ್ಥಾನ ಪ್ರಾರ್ಥನಾ ಮಂದಿರಗಳಲ್ಲಿ ಜನ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದರು. ನಗರದ ಪಾಪನಾಶ ದೇವಸ್ಥಾನ ಗುರುದ್ವಾರ ಹನುಮಾನ ದೇವಸ್ಥಾನ ಬಸವೇಶ್ವರ ದೇವಸ್ಥಾನ ನರಸಿಂಹ ಝರಣಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು. ಮಸೀದಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಾನುವಾರ ತಡರಾತ್ರಿ ವರೆಗೆ ಹೊಸ ವರ್ಷಾಚರಣೆ ಆಚರಿಸಿದ್ದರಿಂದ ಸೋಮವಾರ ನಗರದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.