ADVERTISEMENT

ಕೇಂದ್ರೀಯ ವಿಶ್ವವಿದ್ಯಾಲಯಲ್ಲಿ ಪತ್ರಿಕೋದ್ಯಮ ವಿಭಾಗ: ಪ್ರೊ.ಎಚ್‌.ಎಂ.ಮಹೇಶ್ವರಯ್ಯ

ಬರುವ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 12:24 IST
Last Updated 21 ಸೆಪ್ಟೆಂಬರ್ 2019, 12:24 IST
ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ
ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ   

ಬೀದರ್: ‘ಬರುವ ಶೈಕ್ಷಣಿಕ ವರ್ಷದಿಂದ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ಕಾರ್ಯಾರಂಭ ಮಾಡಲಿದೆ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ತಿಳಿಸಿದರು.

‘ಪ್ರಾರಂಭದಲ್ಲಿ 10 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ. ನಿಯಮಾವಳಿಯಂತೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಶೀಘ್ರದಲ್ಲೇ ಜಾನಪದ ವಿಭಾಗ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಒಬ್ಬರು ಪ್ರೊಫೆಸರ್, ಮೂವರು ಅಸೋಸಿಯೇಟ್ ಪ್ರೊಫೆಸರ್ ಹಾಗೂ ನಾಲ್ವರು ಸಹಾಯಕ ಪ್ರೊಫೆಸರ್ ನೇಮಕಾತಿಗೆ ಅನುಮತಿ ದೊರಕಿದೆ. ಸೋಮವಾರ ಸಂದರ್ಶನ ನಡೆಯಲಿದೆ. ಮೊದಲ ಹಂತದಲ್ಲಿ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು’ ಎಂದು ತಿಳಿಸಿದರು.

‘ವಿಶ್ವ ವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸಲು ಅವಕಾಶ ಇದೆ. ನೀರಿನ ಸಮಸ್ಯೆ ಇರುವ ಕಾರಣ ಹೊಸ ವಿಭಾಗಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಕೆರೆ ತುಂಬುವಷ್ಟು ಮಳೆಯಾಗದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಭೀಮಾ ನದಿಯಿಂದ ಕೆರೆಗೆ ನೀರು ತುಂಬಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ನೀರಿಲ್ಲದಿದ್ದರೆ ವಿಶ್ವವಿದ್ಯಾಲಯ ಮುಚ್ಚಿ ಎಂದು ಕೇಂದ್ರ ಸರ್ಕಾರದ ಕಾರ್ಯದರ್ಶಿ ಹೇಳಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಬೇಸಿಗೆಯಲ್ಲಿ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ. ನೀರಿನ ಸಮಸ್ಯೆ ಮಧ್ಯೆಯೂ ಗುಣಮಟ್ಟದ ಶಿಕ್ಷಣ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದರು.

‘ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ದೇಶದ 65,000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 700 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. 28 ರಾಜ್ಯಗಳ 1,600 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿಗೂ ಜನಪದ ಜೀವಂತ ಇದೆ.ಅಂತರ ರಾಷ್ಟ್ರೀಯ ಜನಪದ ಉತ್ಸವಕ್ಕೆ ವಿಶ್ವವಿದ್ಯಾಲಯದಿಂದ ₹ 2 ಲಕ್ಷ ಕೊಡಲು ಅವಕಾಶ ಇದೆ. ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆದು ನಾಡಿನ ಕಲೆಯನ್ನು ಪ್ರೋತ್ಸಾಹಿಲು ನೆರವು ಕೊಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.