ADVERTISEMENT

ಬೀದರ್‌ನಲ್ಲಿಲ್ಲ ಭಿಕ್ಷುಕರ ಪರಿಹಾರ ಕೇಂದ್ರ, ಹೈ.ಕರ್ನಾಟಕದ ಗಡಿ ಜಿಲ್ಲೆ ಕಡೆಗಣನೆ

ಚಂದ್ರಕಾಂತ ಮಸಾನಿ
Published 20 ಡಿಸೆಂಬರ್ 2018, 19:39 IST
Last Updated 20 ಡಿಸೆಂಬರ್ 2018, 19:39 IST
ಬೀದರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ಆಯೋಜಿಸಿದ್ದ ಭಿಕ್ಷಾಟನೆ ನಿಷೇಧ ಕಾಯ್ದೆಯ ತಿಳಿವಳಿಕೆ ಕಾರ್ಯಕ್ರಮಕ್ಕೆ ನಿರ್ಗತಿಕರನ್ನು ಕರೆ ತರಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಇದ್ದಾರೆ
ಬೀದರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ಆಯೋಜಿಸಿದ್ದ ಭಿಕ್ಷಾಟನೆ ನಿಷೇಧ ಕಾಯ್ದೆಯ ತಿಳಿವಳಿಕೆ ಕಾರ್ಯಕ್ರಮಕ್ಕೆ ನಿರ್ಗತಿಕರನ್ನು ಕರೆ ತರಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಇದ್ದಾರೆ   

ಬೀದರ್‌: ಕಂದಾಯ ಇಲಾಖೆಯ ಸಿಬ್ಬಂದಿ ಮಾಡುತ್ತಿರುವ ಎಡವಟ್ಟಿನಿಂದಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕು ಉಂಟಾಗುತ್ತಿದೆ. ಭಿಕ್ಷುಕರ ಪರಿಹಾರ ಕೇಂದ್ರ ಆರಂಭಿಸಲು ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿದರೂ ಕಂದಾಯ ಇಲಾಖೆಯ ಅಧಿಕಾರಿಗಳು ಪಹಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಸರು ನೋಂದಣಿ ಮಾಡಿರುವ ಕಾರಣ ಭಿಕ್ಷುಕರ ಪರಿಹಾರ ಕೇಂದ್ರ ನಿರ್ಮಾಣದ ಯೋಜನೆಯೇ ಮೂಲೆಗುಂಪಾಗಿದೆ.

ಬೀದರ್‌ ತಾಲ್ಲೂಕಿನ ಘೋಡಂಪಳ್ಳಿ ಸಮೀಪ ಐದು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದರೂ ಕೇಂದ್ರದ ಹೆಸರಿನಲ್ಲಿ ಜಾಗ ಇಲ್ಲದಿರುವುದು ಯೋಜನೆಯ ಅನುಷ್ಠಾನಕ್ಕೆ ತೊಡಕಾಗಿ ಪರಿಣಮಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒಂದು ತಿಂಗಳಿಂದ ಕಂದಾಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡುತ್ತಿದ್ದರೂ ಪಹಣಿಯಲ್ಲಿನ ಹೆಸರು ಬದಲಾವಣೆಯಾಗಿಲ್ಲ. ತೋಟಗಾರಿಕೆ ಇಲಾಖೆಯ ನರ್ಸರಿಗಳೂ ಇಂತಹದ್ದೇ ಸಮಸ್ಯೆ ಎದುರಿಸುತ್ತಿವೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಎರಡು ವರ್ಷಗಳಿಂದ ಪರದಾಡುತ್ತಿದ್ದರೂ ಪ್ರಯೋಜನವಾಗಿಲ್ಲ.

ADVERTISEMENT

ಕಲಬುರ್ಗಿ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ನಿರಾಶ್ರಿತರ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲೂ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಭಿಕ್ಷುಕರಲ್ಲಿ ಪರಿವರ್ತನೆಯ ಬೆಳಕು ಮೂಡಿಸುವ ದಿಸೆಯಲ್ಲಿ ಬೀದರ್‌ನಲ್ಲೂ ಕೇಂದ್ರ ಆರಂಭಿಸಬೇಕು ಎನ್ನುವ ಇಲ್ಲಿಯ ಭಿಕ್ಷುಕರ ಬಹುದಿನಗಳ ಬೇಡಿಕೆ ಕನಸಾಗಿಯೇ ಉಳಿದಿದೆ.

ಅನಾರೋಗ್ಯ ಪೀಡಿತರು, ಶಕ್ತಿಹೀನರು ಹಾಗೂ ವೃದ್ಧಾಪ್ಯದಿಂದಾಗಿ ಭಿಕ್ಷೆ ಬೇಡುತ್ತಿದ್ದವರನ್ನು ಸೆರೆ ಹಿಡಿದು ಪುನರ್ವಸತಿ ಕಲ್ಪಿಸಬೇಕು. ಆದರೆ, ಬೀದರ್‌ನಲ್ಲಿ ಅಪರೂಪಕ್ಕೆ ಭಿಕ್ಷುಕರನ್ನು ಹಿಡಿದರೂ ಅವರನ್ನು ಕಲಬುರ್ಗಿಗೆ ಸಾಗಿಸುವುದು ಪೊಲೀಸರಿಗೂ ತಲೆನೋವಾಗಿದೆ.

ಭಿಕ್ಷುಕರ ಪುನರ್ವಸತಿ ಪರಿಹಾರ ಕೇಂದ್ರಗಳಿಲ್ಲದ ಎಲ್ಲ ಜಿಲ್ಲೆಗಳಲ್ಲೂ ಪುನರ್ವಸತಿ ಕೇಂದ್ರ ತೆರೆಯಲು ಸರ್ಕಾರ ಕ್ರಮ ವಹಿಸಲಿದೆ ಎಂದು 2016ರ ನವೆಂಬರ್‌ನಲ್ಲಿ ವಿಧಾನ ಪರಿಷತ್ತಿನಲ್ಲಿ ಅಂದಿನ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿಕೆ ಕೊಟ್ಟಿದ್ದರು. ಆದರೆ, ಸರ್ಕಾರ ಬೀದರ್ ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

‘ರಾಜ್ಯದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಭಿಕ್ಷಾಟನೆಯಲ್ಲಿ ನಿರತರಾದ ವ್ಯಕ್ತಿಗಳನ್ನು ಬಂಧಿಸಿ ನಿಯಮಾನುಸಾರ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರಿಸಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ’ ಎಂದು ಬೀದರ್‌ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಂದ್ರಕಾಂತ ನಾಸಿ ಹೇಳುತ್ತಾರೆ.

‘ಜಿಲ್ಲಾ ಆಡಳಿತ ನಗರದಲ್ಲಿರುವ ನಿರ್ಗತಿಕರನ್ನು ಗುರುತಿಸಿ ಅವರಿಗೆ ಪುನರ್‌ವಸತಿ ಕಲ್ಪಿಸಬೇಕು. ಬೀದರ್‌ ಪ್ರವಾಸಿ ತಾಣವಾಗಿರುವ ಕಾರಣ ವಿದೇಶಿ ಪ್ರವಾಸಿಗರು ಆಗಾಗ ಭೇಟಿ ಕೊಡುತ್ತಾರೆ. ಜಿಲ್ಲೆಯ ಗೌರವ ಕಾಪಾಡಿಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ನಗರದ ಹೊರ ವಲಯದಲ್ಲಿ ನಿರ್ಗತಿಕರ ಕೇಂದ್ರ ಪ್ರಾರಂಭಿಸಲು ತ್ವರಿತ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಆಕಾಶ ಪಾಟೀಲ ಅಯಾಸಪುರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.