ADVERTISEMENT

ಬಡಾವಣೆಗಳಿಗೆ ದೊರೆಯದ ನಗರ ಸಾರಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಬೀದರ್‌ನ ಗುಂಪಾದಲ್ಲಿ ನಗರ ಸಾರಿಗೆ ಬಸ್‌ಗಾಗಿ ಕಾದು ನಿಂತಿರುವ ಪ್ರಯಾಣಿಕರು
ಬೀದರ್‌ನ ಗುಂಪಾದಲ್ಲಿ ನಗರ ಸಾರಿಗೆ ಬಸ್‌ಗಾಗಿ ಕಾದು ನಿಂತಿರುವ ಪ್ರಯಾಣಿಕರು   

ಬೀದರ್‌: ಹಳ್ಳಿಗಳಿಂದಲೇ ಸುತ್ತುವರಿದ ನಗರಕ್ಕೆ ನಗರ ಸಾರಿಗೆ ಬಸ್‌ಗಳು ಬಂದಿದ್ದೇ 2015ರಲ್ಲಿ. ಅಲ್ಲಿಯವರೆಗೂ ನಗರದ ಜನ ಆಟೊಗಳನ್ನೇ ಆಶ್ರಯಿಸಿದ್ದರು. ಪ್ರಸ್ತುತ ಅನೇಕ ನಗರ ಸಾರಿಗೆ ಬಸ್‌ಗಳಿದ್ದರೂ ನಗರದ ಎಲ್ಲ ಬಡವಾಣೆಗಳ ಜನರಿಗೆ ಅವುಗಳ ಸೇವೆ ದೊರೆಯುತ್ತಿಲ್ಲ.

ನಗರಸಭೆಯ ವ್ಯಾಪ್ತಿಯಲ್ಲಿರುವ ಲುಂಬಿಣಿನಗರ, ಸಿದ್ಧರಾಮೇಶ್ವರ ನಗರ, ವಿದ್ಯಾನಗರ ಮೊದಲಾದ ಬಡವಾಣೆಗಳು ಹಳ್ಳಿಗಳಾಗಿಯೇ ಉಳಿದುಕೊಂಡಿವೆ.

ಭಾಲ್ಕಿ ರಸ್ತೆಯಲ್ಲಿರುವ ಲುಂಬಿಣಿನಗರ ನೌಬಾದ್‌ನ ಬಸವೇಶ್ವರ ವೃತ್ತದಿಂದ ಕೇವಲ ಒಂದೂವರೆ ಕಿ.ಮೀ ಅಂತರದಲ್ಲಿಯೇ ಇದೆ. ವೃತ್ತದಿಂದ ಮುಂದೆ ಸಾಗಿದರೆ ಅರಣ್ಯ ರಕ್ಷಕರ ತರಬೇತಿ ಕೇಂದ್ರ, ಅರಣ್ಯ ಇಲಾಖೆಯ ಸಸ್ಯ ಉದ್ಯಾನ, ಎಂ.ಜಿ.ವಸಂತಾ ಕಾಲೇಜು, ಶಾರದಾ ಪದವಿ ಪೂರ್ವ ಕಾಲೇಜು, ಜಂಗಮ ಜ್ಯೋತಿ ಡಿಇಡಿ ಕಾಲೇಜು ಸಹ ಇದೆ. ಇಲ್ಲಿಗೆ ಈವರೆಗೆ ನಗರ ಸಾರಿಗೆಯ ಸೌಲಭ್ಯವೇ ಇಲ್ಲ.

ADVERTISEMENT

ಬೀದರ್‌ ನಗರ ಉದ್ದಲಾಗಿ 20 ಕಿ.ಮೀ ಬೆಳೆದಿದೆ. ನಗರ ಕೊಳಾರ(ಕೆ) ಗ್ರಾಮದವರೆಗೂ ವಿಸ್ತರಿಸಿದೆ. ಕೊಳಾರದಿಂದ ಹಳೆಯ ಬಸ್‌ ನಿಲ್ದಾಣ ವರೆಗೆ ಒಂದು ಬಸ್‌ ಓಡಿಸಬೇಕು ಎನ್ನುವುದು ಜನರ ಬಹು ದಿನಗಳ ಬೇಡಿಕೆಯಾಗಿದೆ. ಕೊಳಾರದಿಂದ ನಿತ್ಯ ನೂರಾರು ಜನರು ನಗರಕ್ಕೆ ಬಂದು ಹೋಗುತ್ತಾರೆ. ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಓಡಾಡುತ್ತಿರುವ ಕಾರಣ ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೂ ಜನರು ಅನಿವಾರ್ಯವಾಗಿ ಟಂಟಂಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಮಾರ್ಗದಲ್ಲಿ ನಿಯಮಿತವಾಗಿ ಬಸ್‌ಗಳನ್ನು ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಗುಂಪಾದಿಂದ ಚಿಟ್ಟಾ ನಡುವಿನ ಅಂತರ ಎರಡು ಕಿಲೋ ಮೀಟರ್‌ ಸಹ ಇಲ್ಲ. ಚಿಟ್ಟಾದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ, ಸರ್ಕಾರಿ ವಿದ್ಯಾರ್ಥಿಗಳ ವಸತಿ ನಿಲಯ, ರೈತ ಸಂಪರ್ಕ ಇದೆ. ಇಲ್ಲಿಂದ ನಗರಸಭೆಯ ಆಶ್ರಯ ಕಾಲೊನಿಗೂ ಹೋಗಲು ರಸ್ತೆ ಇದೆ. ಲಿಂಗರಾಜ ಅಪ್ಪ ಎಂಜಿನಿಯರಿಂಗ್‌ ಕಾಲೇಜಿಗೂ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ನಗರ ಸಾರಿಗೆ ಬಸ್‌ ನಿಲ್ದಾಣದಿಂದ ಗುಂಪಾವರೆಗೆ ಬರುವ ಬಸ್‌ನ್ನು ಗೋರನಳ್ಳಿ ಆಶ್ರಯ ಕಾಲೊನಿ ವರೆಗೆ ವಿಸ್ತರಿಸಿದರೆ ಅನೇಕ ಜನರಿಗೆ ಸಾರಿಗೆ ಸೌಲಭ್ಯ ದೊರೆಯಲಿದೆ.

ಎಸ್‌.ಎಂ.ಕೃಷ್ಣನಗರವನ್ನು ನಗರಸಭೆ ಪರಿತ್ಯಕ್ತ ನಗರವೆಂದೇ ಕರೆಯಲಾಗುತ್ತಿದೆ. ನಗರಸಭೆಯಲ್ಲಿ ಕೋಟ್ಯಂತರ ಹಣ ಕೊಳೆಯುತ್ತಿದ್ದರೂ ಇಲ್ಲಿಯ ನಿವಾಸಿಗಳಿಗೆ ಅಧಿಕಾರಿಗಳು ಸೌಲಭ್ಯ ಒದಗಿಸಲು ಸಿದ್ಧವಿಲ್ಲ. ಒಂದು ಬಸ್‌ ನಿರಂತರವಾಗಿ ಬಂದು ಹೋಗುತ್ತದೆ. ಎಸ್‌.ಎಂ.ಕೃಷ್ಣನಗರದಲ್ಲೇ 100 ಆಟೊರಿಕ್ಷಾಗಳು ಇವೆ. ಆದರೂ ನಗರ ಸಾರಿಗೆ ಬಸ್‌ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದರೂ ಸೇವೆಯನ್ನು ಕೊಡುತ್ತಿದೆ. ಬೀದರ್–ಮನ್ನಾಎಖ್ಖೆಳ್ಳಿ ಮಧ್ಯೆ ಸಂಚರಿಸುವ ಬಸ್‌ಗಳು ಎಸ್.ಎಂ.ಕೃಷ್ಣನಗರಕ್ಕೆ ಬಂದು ಹೋದರೆ ಅನೇಕ ಜನರಿಗೆ ಸೌಲಭ್ಯ ಕಲ್ಪಿಸಿದಂತಾಗಲಿದೆ.

ಮೈಲೂರು, ಗುಂಪಾ, ನರಸಿಂಹ ಝರಣಾ, ನೌಬಾದ್ ವರೆಗೆ ಮಾತ್ರ ನಗರ ಸಾರಿಗೆ ಬಸ್‌ಗಳು ಇವೆ. ಅವು ಸಹಿತ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ವಿಳಂಬವಾಗಿ ಬಂದರೂ ಪಾಸ್‌ ಇರುವ ವಿದ್ಯಾರ್ಥಿಗಳು ಮಾತ್ರ ಬಸ್‌ಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾರೆ. ಉಳಿದ ಪ್ರಯಾಣಿಕರು ಆಟೊದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ನಗರ ಸಾರಿಗೆಗೂ ನಷ್ಟವಾಗುತ್ತಿದೆ.

ಪ್ರವಾಸಿಗರಿಗೆ ಅನುಕೂಲವೇ ಇಲ್ಲ

ಐತಿಹಾಸಿಕ ನಗರಕ್ಕೆ ಬರುವ ಪ್ರವಾಸಿಗರಿಗೆ ಎಳ್ಳಷ್ಟೂ ಇಲ್ಲಿಯ ನಗರ ಸಾರಿಗೆ ಬಸ್‌ಗಳ ಸೌಲಭ್ಯ ದೊರೆಯುತ್ತಿಲ್ಲ. ನಗರದಲ್ಲಿರುವ ಸ್ಮಾರಕಗಳ ಕಡೆಗೆ ಬಸ್‌ಗಳೇ ಸಂಚರಿಸುತ್ತಿಲ್ಲ. ನಗರದ ಜನತೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಓಡಿಸಬೇಕಿದೆ.

ಕೇಂದ್ರ ಬಸ್‌ ನಿಲ್ದಾಣದಿಂದ ಕೋಟೆ ಆವರಣ, ಜಿಲ್ಲಾಧಿಕಾರಿ ನಿವಾಸ, ಮೆಹಮೂದ್‌ ಗವಾನ ವೃತ್ತದ ಮಾರ್ಗವಾಗಿ ಚೌಬಾರಾ ವರೆಗೂ ಬಸ್‌ ಸಂಚಾರ ಅರಂಭಿಸಿದರೆ ಓಲ್ಡ್‌ಸಿಟಿ ನಿವಾಸಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರವಾಸಿಗರು ಸ್ಮಾರಕ ವೀಕ್ಷಣೆಗೆ ಸುಲಭವಾಗಿ ಬಂದು ಹೋಗುವಂತಹ ವಾತಾವರಣ ಸೃಷ್ಟಿಯಾಗಲಿದೆ.

ಬಸ್‌ ನಿಲ್ದಾಣದಿಂದ ನಯಾ ಕಮಾನ್, ಚೌಬಾರಾ, ಜಿಲ್ಲಾ ಪಂಚಾಯಿತಿ ಕಚೇರಿ, ಕೋಟೆ ಮುಂಭಾಗದ ವೃತ್ತದ ಮಾರ್ಗವಾಗಿ ಫತೇಪುರಕ್ಕೆ ಬಸ್‌ ಸೌಲಭ್ಯ ಒದಗಿಸಿದರೆ ಪ್ರವಾಸಿಗರಿಗೆ ಈ ಮಾರ್ಗದಲ್ಲಿರುವ ಎಲ್ಲ ಸ್ಮಾರಕಗಳ ವೀಕ್ಷಣೆ ಸಾಧ್ಯವಾಗಲಿದೆ.

***

ಕೊಳಾರ ಹಾಗೂ ಪ್ರತಾಪನಗರ ಕೈಗಾರಿಕೆ ಪ್ರದೇಶದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಹಳೆಯ ಬಸ್‌ ನಿಲ್ದಾಣದಿಂದ ಕೊಳಾರವರೆಗೆ ನಿರಂತರವಾಗಿ ನಗರ ಸಾರಿಗೆ ಬಸ್‌ ಓಡಿಸಬೇಕು.
-ಅರವಿಂದ ರಾಠೋಡ,ಸೇವಾನಗರ ನಿವಾಸಿ

ನಗರ ಸಾರಿಗೆಯಿಂದ ಲುಂಬಿಣಿನಗರದಿಂದ ಗುಂಪಾವರೆಗೆ ನೇರವಾದ ಬಸ್‌ ಸೇವೆ ಒದಗಿಸಿದರೆ ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
-ಆಕಾಶ ಜಾಧವ,ವಸಂತಾ ಕಾಲೇಜಿನ ವಿದ್ಯಾರ್ಥಿ

ಸಿಟಿ ಬಸ್‌ಗಳಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತಿಲ್ಲ. ಕೇಂದ್ರ ಬಸ್‌ ನಿಲ್ದಾಣದಿಂದ ಅಂಬೇಡ್ಕರ್‌ ವೃತ್ತ, ಶಹಾಗಂಜ್‌ ಕಮಾನ್‌ ಮುಂಭಾಗದಿಂದ ಮುಲ್ತಾನಿಪಾಷಾ ದರ್ಗಾ ಮಾರ್ಗವಾಗಿ ಕೋಟೆ ವರೆಗೆ ಬಸ್‌ ಓಡಿಸಬೇಕು.
-ಮೊಗಲಪ್ಪ,ನಗರ ನಿವಾಸಿ

ಎರಡು ವರ್ಷಗಳ ಹಿಂದೆ ನಗರ ಸಾರಿಗೆ ಬಸ್‌ಗಳು ಚೌಬಾರಾ ವರೆಗೂ ಬಂದು ಹೋಗುತ್ತಿದ್ದವು. ಬಂದ್ ಮಾಡಿದ ಮೇಲೆ ನಾಗರಿಕರಿಗೆ ತೊಂದರೆಯಾಗಿದೆ.
-ಜಗದೇವಿ ವೀರಶೆಟ್ಟಿ,ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.