ಬೀದರ್: ‘ಕಲೆ ಕಾಲಾತೀತ, ಸೀಮಾತೀತವಾದುದು. ಅದು ಎಲ್ಲರಿಗೂ ಪರಮಾನಂತ ನೀಡುತ್ತದೆ. ಅದನ್ನು ಜಾತಿ, ಮತ, ಪಂಥದ ಹಂಗಿಲ್ಲ’ ಎಂದು ರಾಷ್ಟ್ರೀಯ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್ ರತನಲಾಲ್ ವೈದ್ಯ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನ ಕನ್ನಡ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಭಾಗವಹಿಸಿ ‘ಭಾರತೀಯ ಸಂಸ್ಕೃತಿ’ ಕುರಿತು ಉಪನ್ಯಾಸ ನೀಡಿದರು.
ಕಲೆಗೆ ಸಮಯ, ಪ್ರದೇಶದ ಬಂಧನ ಇಲ್ಲ. ಮನುಷ್ಯ ಹುಟ್ಟಿದಾಗ ಜಾತಿ, ಮತಗಳ ಯಾವುದೇ ಬಂಧನ ಇರಲಿಲ್ಲ. ನಂತರದ ದಿನಗಳಲ್ಲಿ ನಾನಾ ಅಚರಣೆ, ಮತ್ತಿತರ ಕಾರಣಗಳಿಂದಾಗಿ ಜಾತಿ, ಮತ, ಪಂಥಗಳು ಹುಟ್ಟಿಕೊಂಡವು. ಆದರೆ, ಕಲೆ ಇವೆಲ್ಲವನ್ನು ಮೀರಿ ಬೆಳೆದಿದೆ ಎಂದರು.
ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದೆ. ಅದು ನಮ್ಮ ಸಂಸ್ಕೃತಿಯ ಭಾಗ. ಅದನ್ನೀಗ ಪಾಶ್ಚಾತ್ಯರೂ ಅನುಸರಿಸುತ್ತಿದ್ದಾರೆ. ಇದರ ಮಹತ್ವ ಎಷ್ಟಿದೆ ಎಂಬುದನ್ನು ಅರಿಯಬಹುದು ಎಂದು ಹೇಳಿದರು.
ಆಚರಣೆಗಳು ಎಷ್ಟೇ ಭಿನ್ನವಾಗಿದ್ದರೂ ಅವೆಲ್ಲವುಗಳನ್ನೂ ಸಂಸ್ಕೃತಿ ಜೋಡಿಸುತ್ತದೆ. ಎಲ್ಲರನ್ನೂ ಒಂದುಗೂಡಿಸುವ ಅದ್ಭುತ ಶಕ್ತಿ ಸಂಸ್ಕೃತಿಗಿದೆ. ಈ ಸಂಸ್ಕೃತಿಯನ್ನು ಸಂರಕ್ಷಿಸುವ, ಸಶಕ್ತಗೊಳಿಸುವ ಕಾರ‍್ಯ ಆಗಬೇಕಾಗಿದೆ ಎಂದು ತಿಳಿಸಿದರು.
ಜಾನಪದ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದವುಗಳ ಮೂಲಕ ಸಂಸ್ಕೃತಿಯು ಪ್ರಸಾರವಾಗುತ್ತಿದೆ. ಹಬ್ಬ ಹರಿದಿನಗಳು, ಕೌಟುಂಬಿಕ ಆಚರಣೆಗಳೂ ಸಂಸ್ಕೃತಿಯನ್ನು ಪರಿಚಯಿಸುತ್ತವೆ ಎಂದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಜಗನ್ನಾಥ ಹೆಬ್ಬಾಳೆ ಮಾತನಾಡಿ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತು ಬಹಳ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜಾನಪದ ವಿಶ್ವವಿದ್ಯಾಲಯಕ್ಕೆ ಸಾಕಷ್ಟು ಅನುದಾನವೂ ಲಭಿಸಿದೆ. ಜಾನಪದ ವಿಶ್ವವಿದ್ಯಾಲಯದಲ್ಲಿ ವಸ್ತು ಸಂಗ್ರಹಾಲಯ ಆರಂಭಿಸಲಾಗಿದೆ. ಬೀದರ್‌ನಲ್ಲೂ ಆರಂಭಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಕಲೆ ಮತ್ತು ಕಲಾವಿದರನ್ನು ಆರ್ಥಿಕವಾಗಿ ಸಬಲಗೊಳಿಸಲು ಹಲವು ಕಾರ‍್ಯಕ್ರಮ ರೂಪಿಸಲಾಗಿದೆ. ಬೇರೆ ಬೇರೆ ರಾಜ್ಯಗಳ ಕಲಾವಿದರನ್ನು ಆಹ್ವಾನಿಸುವ ಮೂಲಕ ಸಾಂಸ್ಕೃತಿಕ ವಿನಿಯಮಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಪತ್ರಕರ್ತ ಮಾರುತಿ ಸೋನಾರ, ಮಹಾನಂದ ಮಡಕಿ, ಸುನೀತಾ ಕೂಡ್ಲಿಕರ್, ಮಲ್ಲಯ್ಯ ಮಠಪತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.