ADVERTISEMENT

ಸಾಲದ ಅಸಲು ಪಾವತಿಗೆ ಸಿಗದ ಸ್ಪಂದನೆ: ಬಡ್ಡಿ ಮನ್ನಾ ಯೋಜನೆ ಮುಕ್ತಾಯ ಇಂದು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಫೆಬ್ರುವರಿ 2024, 6:02 IST
Last Updated 29 ಫೆಬ್ರುವರಿ 2024, 6:02 IST
<div class="paragraphs"><p>ಬೀದರ್‌ ಡಿಸಿಸಿ ಬ್ಯಾಂಕ್‌</p></div>

ಬೀದರ್‌ ಡಿಸಿಸಿ ಬ್ಯಾಂಕ್‌

   

ಬೀದರ್‌: ಮಧ್ಯಮ ಅವಧಿಯ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಯೋಜನೆಗೆ ಜಿಲ್ಲೆಯಲ್ಲಿ ರೈತರಿಂದ ಹೇಳಿಕೊಳ್ಳುವಂತಹ ಸ್ಪಂದನೆ ದೊರೆತಿಲ್ಲ.

ಬೀದರ್‌ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ), ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ (ಪಿಎಲ್‌ಡಿ) ಸಾಲ ಪಡೆದ ರೈತರಿಗೆ ರಾಜ್ಯ ಸರ್ಕಾರವು ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಯೋಜನೆಯನ್ನು 2024ರ ಜನವರಿ 20ರಂದು ಘೋಷಿಸಿತ್ತು. ಅಸಲು ಪಾವತಿಗೆ ಗುರುವಾರ (ಫೆ.29) ಕಡೆಯ ದಿನವಾಗಿದೆ. ಆದರೆ, ಅಂಕಿ ಅಂಶಗಳನ್ನು ಅವಲೋಕಿಸಿದರೆ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ರೈತರು ನಿರಾಸಕ್ತಿ ತೋರಿಸಿರುವುದು ಗೊತ್ತಾಗುತ್ತದೆ.

ADVERTISEMENT

‘ಜಿಲ್ಲೆಯಲ್ಲಿ ಪಿಎಲ್‌ಡಿ ಬ್ಯಾಂಕುಗಳಿಂದ ಒಟ್ಟು 700 ರೈತರು ₹6.62 ಕೋಟಿ ಮಧ್ಯಮ ಅವಧಿಯ ಸಾಲ ಪಡೆದುಕೊಂಡಿದ್ದಾರೆ. ಈ ಪೈಕಿ 321 ಜನ ₹3.25 ಕೋಟಿ ಸಾಲದ ಅಸಲು ಕಟ್ಟಿದ್ದಾರೆ’ ಎಂದು ಪಿಎಲ್‌ಡಿ ಬ್ಯಾಂಕ್‌ ಡಿಎಂ ಲೋಕೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇನ್ನು, ಬೀದರ್‌ ಡಿಸಿಸಿ ಬ್ಯಾಂಕ್‌ ಪರಿಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ. ಜಿಲ್ಲೆಯ 188 ರೈತರು ₹48 ಕೋಟಿ ಸಾಲ ಪಡೆದುಕೊಂಡಿದ್ದರು. ಇದುವರೆಗೆ ₹11 ಕೋಟಿ ಅಸಲು ಪಾವತಿಸಲಾಗಿದೆ. ಶೇ 32ರಷ್ಟು ರೈತರು ಅಸಲು ಪಾವತಿಸಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಅಸಲು ಪಾವತಿಗೆ ಹಿಂದೇಟೇಕೆ?: ಸಮರ್ಪಕವಾಗಿ ಮಳೆಯಾಗದ ಕಾರಣ ಈ ವರ್ಷ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬಂಡವಾಳ ಹಾಕಿ ಬೆಳೆಸಿದ ಬೆಳೆ ಕೈಸೇರದ ಕಾರಣ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆಗೆ ಒಳಗಾಗುತ್ತಿದ್ದು, ರೈತರ ಆರ್ಥಿಕವಾಗಿ ದುರ್ಬಲರಾಗುತ್ತ ಹೋಗುತ್ತಿದ್ದಾರೆ. ಹಳೆಯ ಸಾಲ ತೀರಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆ ಘೋಷಿಸಿದೆ. ಆದರೆ, ಬಹುತೇಕರಿಗೆ ತುಂಬಲು ಸಾಧ್ಯವಾಗಿಲ್ಲ.

ಇನ್ನು, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಿಲ್ಲ. ಹಿಂಗಾರಿನಲ್ಲಿ ಬೆಳೆದ ಬೆಳೆಗಳ ರಾಶಿ ಈಗಷ್ಟೇ ನಡೆಯುತ್ತಿದ್ದು, ಇನ್ನಷ್ಟೇ ಅವುಗಳನ್ನು ಮಾರಾಟ ಮಾಡಬೇಕು. ಪರಿಸ್ಥಿತಿ ಹೀಗಿರುವುದರಿಂದ ರೈತರು ಸಾಲದ ಅಸಲು ಪಾವತಿ ಸಾಧ್ಯವಾಗಿಲ್ಲ. ಹಾಗಾಗಿ ಯೋಜನೆಯನ್ನು ಏಪ್ರಿಲ್‌ ಕೊನೆಯ ವರೆಗೆ ವಿಸ್ತರಿಸಬೇಕೆನ್ನುವುದು ರೈತ ಸಂಘಟನೆಗಳ ಬೇಡಿಕೆಯಾಗಿದೆ.

ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾಗೊಳಿಸುವ ಯೋಜನೆ ಏಪ್ರಿಲ್‌ ಕೊನೆಯ ವರೆಗೆ ವಿಸ್ತರಿಸಬೇಕು.
ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ರೈತ ಸಂಘ
ಸಾಲದ ಅಸಲು ಪಾವತಿಸಲು ಫೆಬ್ರುವರಿ 29 ಕೊನೆಯ ದಿನವಾಗಿದೆ. ಹೆಚ್ಚಿನ ರೈತರು ಸಾಲ ಭರಿಸುವ ನಿರೀಕ್ಷೆ ಇದೆ
ಮಂಜುಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಸಿಸಿ ಬ್ಯಾಂಕ್‌
ಅಂಕಿ ಅಂಶ
700 ರೈತರು ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ₹6.62 ಕೋಟಿ ಮಧ್ಯಮಾವಧಿ ಸಾಲ ಹಂಚಿಕೆ ₹3.25 ಕೋಟಿ 321 ರೈತರಿಂದ ಪಾವತಿಯಾದ ಅಸಲು 188 ರೈತರು ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದವರು ₹11 ಕೋಟಿ ರೈತರಿಂದ ಪಾವತಿಯಾದ ಅಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.