ADVERTISEMENT

ಬೀದರ್ | ಓಲ್ಡ್‌ಸಿಟಿ ಸೀಲ್‌ಡೌನ್‌ ಸಂಪೂರ್ಣ ತೆರವು

ಸಹಜ ಸ್ಥಿತಿಯತ್ತ ಬೀದರ್‌ ನಗರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:35 IST
Last Updated 5 ಜೂನ್ 2020, 4:35 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಎರಡೂವರೆ ತಿಂಗಳ ನಂತರ ಅಂಗಡಿಗಳು ಬಾಗಿಲು ತೆರೆದುಕೊಂಡವು
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಎರಡೂವರೆ ತಿಂಗಳ ನಂತರ ಅಂಗಡಿಗಳು ಬಾಗಿಲು ತೆರೆದುಕೊಂಡವು   

ಬೀದರ್‌: ಸುಮಾರು ಎರಡೂವರೆ ತಿಂಗಳ ನಂತರ ಇಲ್ಲಿಯ ಓಲ್ಡ್‌ಸಿಟಿಯ ಸೀಲ್‌ಡೌನ್‌ ಸಂಪೂರ್ಣ ತೆರವುಗೊಳಿಸಲಾಗಿದೆ. ಬುಧವಾರ ಸಂಜೆ ಸೀಲ್‌ಡೌನ್ ಆದೇಶ ಹಿಂದಕ್ಕೆ ಪಡೆದ ನಂತರ ಜನ ಮನೆಯಿಂದ ಹೊರಗೆ ಬರುವಂತಾಯಿತು.

ಓಲ್ಡ್‌ಸಿಟಿಯ ಮಾರುಕಟ್ಟೆಯಲ್ಲಿ ಕೆಲವು ಅಂಗಡಿಗಳು ಮಾತ್ರ ತೆರೆದುಕೊಂಡಿದ್ದವು. ಇಲ್ಲಿ 44 ಜನ ಕೋವಿಡ್‌ -19 ಸೋಂಕಿತರು ಪತ್ತೆಯಾಗಿದ್ದರು. ಹೀಗಾಗಿ ಓಲ್ಡ್‌ಸಿಟಿಯ ಎಲ್ಲ ಮಾರ್ಗಗಳನ್ನು ಬಂದ್‌ ಮಾಡಲಾಗಿತ್ತು. ಆಗಮನ ಹಾಗೂ ನಿರ್ಗಮನಕ್ಕೆ ಒಂದೇ ಮಾರ್ಗವನ್ನು ಗೊತ್ತುಪಡಿಸಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು.

ಓಲ್ಡ್‌ಸಿಟಿಯ ನಿವಾಸಿಗಳು ಒಮ್ಮೆ ಪ್ರತಿಭಟನೆಯನ್ನೂ ಮಾಡಿದ್ದರು. ಕೆಲವು ಸಂಘಟನೆಗಳು ಸೀಲ್‌ಡೌನ್‌ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದವು.

ADVERTISEMENT

ಹದಿನೈದು ದಿನಗಳಿಂದ ಈ ಪ್ರದೇಶದಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ತೆರವುಗೊಳಿಸಲಾಗಿದೆ. ಇದರಿಂದ ಗುರುವಾರ ಓಲ್ಡ್‌ಸಿಟಿ ನಿವಾಸಿಗಳಲ್ಲಿ ನಿರಾಳ ಭಾವ ಕಂಡು ಬಂದಿತು.

ವಲಸಿಗರಿಗೆ 6 ರ ವರೆಗೆ ಪಡಿತರ ಪಡೆಯಲು ಅವಕಾಶ: ಕೇಂದ್ರದಿಂದ ರಾಜ್ಯಕ್ಕೆ ನೀಡಿರುವ ಆಹಾರಧಾನ್ಯವನ್ನು ಜೂನ್‌ 6ರ ವರೆಗೆ ಪಡೆಯಲು ವಲಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ, ಒಂದು ಕುಟುಂಬಕ್ಕೆ 2 ಕೆ.ಜಿ ಕಡಲೆ ಬೇಳೆ ವಿತರಿಸಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ತಿಳಿಸಿದ್ದಾರೆ.

ವಲಸೆ ಕಾರ್ಮಿಕರು ಕಡ್ಡಾಯವಾಗಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯೊಂದಿಗೆ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಬಯೊಮೆಟ್ರಿಕ್ ಮೂಲಕ ಪಡಿತರ ಪಡೆಯಬಹುದು.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮತ್ತು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.